ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಮೊದಲ ಮಹಿಳಾ ಉಪ ಕುಲಪತಿ ನಜ್ಮಾ ಅಖ್ತರ್
ಹೊಸದಿಲ್ಲಿ, ಎ. 12: ಹೊಸದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಶಿಕ್ಷಣ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆಯ ಅಧ್ಯಾಪಕಿ ನಜ್ಮಾ ಅಖ್ತರ್ ಅವರನ್ನು ಗುರುವಾರ ನಿಯೋಜಿಸಲಾಗಿದೆ. ಇವರು 99 ವರ್ಷಗಳ ಹಳೆಯ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಉಪ ಕುಲಪತಿ.
ಅಖ್ತರ್ ಅವರ ನಿಯೋಜನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ಬಿಹಾರದ ಮಹಾತ್ಮಾ ಗಾಂಧಿ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಉಪ ಕುಲಪತಿಯಾಗಿ ಸಂಜೀವ್ ಶರ್ಮಾ, ಮಹಾರಾಷ್ಟ್ರದಲ್ಲಿರುವ ಮಹಾತ್ಮಾ ಗಾಂಧಿ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ರಜನೀಶ್ ಕುಮಾರ್ ಶುಕ್ಲಾ ಅವರ ನಿಯೋಜನೆಗೆ ಕೂಡ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಹೊಸದಿಲ್ಲಿಯಲ್ಲಿರುವ ಶಿಕ್ಷಣ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆಯಲ್ಲಿ ಶಿಕ್ಷಣದಲ್ಲಿ ಸಾಮರ್ಥ್ಯ ನಿರ್ಮಾಣ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಅಖ್ತರ್ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಜಾಮಿಯಾದ ಉಪ ಕುಲಪತಿಯನ್ನಾಗಿ ಐದು ವರ್ಷಗಳಿಗೆ ನಿಯೋಜಿಸಲಾಗಿದೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.
ಅಖ್ತರ್ ಅವರು ಅಲಿಗಢ ಮುಸ್ಲಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ ವಿಜೇತರು. ಅವರು ತಮ್ಮ ಪಿಎಚ್‌ಡಿ ಸಂಶೋಧನೆಯನ್ನು ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ್ದರು. ಅವರು ವಾರ್‌ವಿಕ್ ಹಾಗೂ ನ್ಯಾಟಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದಲ್ಲಿ ಕಾಮನ್‌ವೆಲ್ತ್ ಫೆಲೋ ಆಗಿದ್ದರು ಎಂದು ಶಿಕ್ಷಣ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆಯ ವೆಬ್‌ಸೈಟ್ ಹೇಳಿದೆ.