ಇವಿಎಂಗಳ ಅವಾಂತರ: ಆಂಧ್ರದಲ್ಲಿ ತಡರಾತ್ರಿಯವರೆಗೂ ನಡೆದ ಮತದಾನ

Update: 2019-04-13 04:41 GMT

ಅಮರಾವತಿ,ಎ.12: ದೋಷಪೂರಿತ ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಅವಾಂತರಗಳಿಂದಾಗಿ ಗುರುವಾರ ಆಂಧ್ರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿಯ 300ಕ್ಕೂ ಅಧಿಕ ಮತಗಟ್ಟೆಗಳಲ್ಲಿ ತಡರಾತ್ರಿಯವರೆಗೂ ಮತದಾನ ಮುಂದುವರಿದಿತ್ತು.

ಮತದಾನದ ನಿಗದಿತ ಅವಧಿ ಸಂಜೆ ಆರು ಗಂಟೆಗೇ ಅಂತ್ಯಗೊಂಡಿದ್ದರೂ,ಮತಗಟ್ಟೆಗಳ ಹೊರಗೆ ಸರದಿ ಸಾಲುಗಳಲ್ಲಿ ಕಾದು ನಿಂತಿದ್ದ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.

ಗುರುವಾರ ಸಂಜೆ ಆರು ಗಂಟೆಯವರೆಗೆ ರಾಜ್ಯದ 175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ ಶೇ.74ಕ್ಕೂ ಅಧಿಕ ಮತದಾನ ನಡೆದಿತ್ತು.

380ಕ್ಕೂ ಅಧಿಕ ಮತಗಟ್ಟೆಗಳಲ್ಲಿ ಇವಿಎಮ್‌ಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಕಾದು ಕಾದು ಸುಸ್ತಾಗಿದ್ದ ಹಲವಾರು ಮತದಾರರು ತಮ್ಮ ಮನೆಗಳಿಗೆ ವಾಪಸಾಗಿದ್ದರು. ಅಧಿಕಾರಿಗಳು ದೋಷಗಳನ್ನು ನಿವಾರಿಸಿದ ಮತ್ತು ಕೆಲವು ಇವಿಎಂಗಳನ್ನು ಬದಲಿಸಿದ ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭಗೊಂಡಿತ್ತು. ಸಂಜೆ ಆರು ಗಂಟೆಗೆ ಮೊದಲು ಮತಗಟ್ಟೆಗಳನ್ನು ತಲುಪಿದ್ದ ಎಲ್ಲ ಮತದಾರರಿಗೂ ತಡರಾತ್ರಿಯವರೆಗೆ ಮತದಾನಕ್ಕೆ ಅವಕಾಶವನ್ನು ನೀಡಲಾಗಿತ್ತು.

ಮಂಗಳಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ ಅವರು ಇವಿಎಂ ಮತ್ತು ವಿವಿಪ್ಯಾಟ್‌ಗಳ ವೈಫಲ್ಯದಿಂದಾಗಿ ಗಂಟೆಗಟ್ಟಲೆ ಸರದಿ ಸಾಲುಗಳಲ್ಲಿ ಕಾದು ನಿಂತಿದ್ದ ಮತದಾರರಿಗೆ ಕುಡಿಯುವ ನೀರಿನಂತಹ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ ತಡರಾತ್ರಿ ತಾಡಪಲ್ಲಿ ಪಟ್ಟಣದ ಮತಗಟ್ಟೆಯೊಂದರ ಎದುರು ಪ್ರತಿಭಟನೆಯನ್ನು ನಡೆಸಿದರು.

ಈ ವೇಳೆ ಅಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಅಣಕಿಸಿದ್ದಲ್ಲದೆ, ವಾಪಸ್ ಹೋಗುವಂತೆ ಮತ್ತು ಮತದಾನ ಪ್ರಕ್ರಿಯೆಗೆ ಅಡ್ಡಿಯನ್ನು ಮಾಡದಂತೆ ಘೋಷಣೆಗಳನ್ನು ಕೂಗಿದರು. ಇದಕ್ಕೆ ಸಡ್ಡು ಹೊಡೆಯಲು ಟಿಡಿಪಿ ಕಾರ್ಯಕರ್ತರು ಪ್ರಯತ್ನಿಸಿದಾಗ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು. ಸಕಾಲಕ್ಕೆ ಧಾವಿಸಿದ ಪೊಲೀಸರು ಉಭಯ ಗುಂಪುಗಳನ್ನು ಚದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News