'ಮೋದಿಯಿಂದಾಗಿ ಗೇರುಬೀಜ ಕಾರ್ಖಾನೆಗಳು ಸಂಕಷ್ಟದಲ್ಲಿ'

Update: 2019-04-12 15:05 GMT

ಹೆಬ್ರಿ, ಎ.12: ಮನಮೋಹನ ಸಿಂಗ್ ಸರಕಾರದ ಅವಧಿಯಲ್ಲಿ ಕಾರ್ಮಿಕ ಮಹಿಳೆಯರ ಕೈಯಲ್ಲಿ ಹಣ ಇತ್ತು. ನೆಮ್ಮದಿ ಇತ್ತು, ನಂತರ ಬಂದ ನರೇಂದ್ರ ಮೋದಿ ಸರಕಾರದಿಂದಾಗಿ ಇಂದು ಮಹಿಳೆಯರು ಕಣ್ಣೀರು ಹಾಕುವ ದಿನಗಳು ಬಂದಿವೆ. ನೋಟು ಅಮಾನ್ಯೀಕರಣ ಹಾಗೂ ವಿಪರೀತ ಜಿಎಸ್‌ಟಿ ತೆರಿಗೆಯ ಹೇರಿಕೆಯಿಂದಾಗಿ ನಮ್ಮ ಜಿಲ್ಲೆಯ ಬಹುತೇಕ ಗೇರುಬೀಜ ಕಾರ್ಖಾನೆಗಳು ಮುಳುಗುವ ಹಂತಕ್ಕೆ ತಲುಪಿದ್ದು, ಮಾಲಕರು ಕಾರ್ಮಿಕರಿಗೆ ಕೆಲಸ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಶುಕ್ರವಾರ ಹೆಬ್ರಿ ತಾಲೂಕು ವ್ಯಾಪ್ತಿಯ ವಿವಿಧ ಗೇರುಬೀಜದ ಕಾರ್ಖಾನೆಗೆ ತೆರಳಿ ಮತಯಾಚನೆ ನಡೆಸಿ ಪ್ರಮೋದ್ ಮಧ್ವರಾಜ್ ಮಾತನಾಡುತಿದ್ದರು. ಬಿಜೆಪಿಯವರು ನಿಮ್ಮಲ್ಲಿ ಬಂದು ಮೋದಿಗೆ ಓಟು ಕೊಡಿ ಎಂದು ಕೇಳುತ್ತಾರೆ. ಮೋದಿ ಓಟಿಗೆ ನಿಂತಿರುವುದು ದೂರದ ವಾರಣಾಸಿಯಲ್ಲಿ, ನಿಮ್ಮ ಸಮಸ್ಯೆ ಯನ್ನು, ನಿಮ್ಮ ಕೆಲಸವನ್ನು ಮೋದಿಯಲ್ಲಿ ಹೇಳಲು ಆಗಲ್ಲ ಗ್ರಾಪಂ ಸದಸ್ಯನಂತೆ ನಿಮ್ಮ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಪ್ರಮೋದ್ ಮನವಿ ಮಾಡಿದರು.

ಮೋದಿಯಿಂದಾಗಿ ಇಂದು ದೇಶದ ಬಹುತೇಕ ಕಂಪೆನಿಗಳು ಮುಚ್ಚುವ ಹಂತ ತಲುಪಿವೆ. ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಮೋದಿಗೆ ಜನಸಾಮಾನ್ಯರು ಬೇಡ. ಅವರಿಗೆ ಕೇವಲ ಅಂಬಾನಿ-ಅದಾನಿಗಳು ಮಾತ್ರ ಸಾಕು. ಮೋದಿ ಪ್ರದಾನಿಯಾಗುವ ಮೊದಲು ಅಂಬಾನಿ ಆಸ್ತಿ ಮೌಲ್ಯ 16 ಲಕ್ಷ ಕೋಟಿ ಇತ್ತು. ಈಗ 31 ಲಕ್ಷ ಕೋಟಿ ಆಗಿದೆ. ನಮ್ಮ ಹಣವನ್ನು ಮೋದಿ ಪರೋಕ್ಷವಾಗಿ ಅವರಿಬ್ಬರಿಗೆ ವರ್ಗಾಯಿಸಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಆರೋಪಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್‌ಗೆ 350 ರೂ. ಇತ್ತು. ಇಂದು ಅದು 900 ರೂ. ಆಗಿದೆ. ಅದೇ ರೀತಿ ಮರಳು ಸಮಸ್ಯೆ ಹೆಚ್ಚಾಗಲು ಕೇಂದ್ರ ಸರಕಾರ ಕಾರಣ. ನಾನು ಆಯ್ಕೆಯಾದರೆ ಕೇಂದ್ರ ಸರಕಾರದಲ್ಲಿ ಜಿಲ್ಲೆಯ ಮರಳು ಜಿಲ್ಲೆಯ ಜನತೆಗೆ ಸಿಗಲು ಹೊಸ ಕಾನೂನು ಮಾಡಿ ಎಲ್ಲರಿಗೂ ಸುಲಭದಲ್ಲಿ ಮರಳು ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಿವಪುರ, ಕನ್ಯಾನ, ಚಾರ, ಹೆಬ್ರಿ, ಕಾರ್ಕಳ ರೈತಸೇವಾ ಗ್ರಾಮೋದ್ಯೋಗ ಲಕ್ಷ್ಮಿನಾರಾಯಣ ಕಾರ್ಖಾನೆ ಸೇರಿದಂತೆ ವಿವಿದೆಡೆಗಳ ಗೇರು ಬೀಜದ ಕಂಪೆನಿಗಳಿಗೆ ಭೇಟಿ ನೀಡಿ ಪ್ರಮೋದ್ ವುಧ್ವರಾಜ್ ಮತಯಾಚನೆ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಗೋಪಾಲ ಭಂಡಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾಂಗ್ರೆಸ್ ನಾಯಕ ನೀರೆ ಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ ಶೆಟ್ಟಿ, ಹೆಬ್ರಿ ಎಚ್.ಜನಾರ್ಧನ್, ಆರೀಫ್ ಕಲ್ಲೋಟ್ಟೆ, ಎಚ್.ನರೇಂದ್ರ ನಾಯಕ್, ಜೆಡಿಎಸ್ ಕಾರ್ಯಧ್ಯಕ್ಷ ಶ್ರೀಕಾಂತ್ ಪೂಜಾರಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News