ಬದುಕು ರೂಪಿಸುವಲ್ಲಿ ಶಿಕ್ಷಣದ ಪಾತ್ರ ಪ್ರಮುಖ: ಪ್ರೊ. ಪದ್ಮಾ ರಾಮಚಂದ್ರನ್
ಕೊಣಾಜೆ: ಉತ್ತಮ ಬದುಕನ್ನು ಕಟ್ಟಿಕೊಡುವಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾದುದು. ಶಿಕ್ಷಣದೊಂದಿಗೆ ಉತ್ತಮ ಕೌಶಲ್ಯ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ವಿಗಳಿಸಲು ಸಾಧ್ಯ ಎಂದು ಬರೋಡ ಎಂ.ಎಸ್. ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಕೇರಳ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಪ್ರೊ.ಪದ್ಮಾ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ 37 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.
ಇಡೀ ಜಗ್ತತನ್ನೇ ಗೆಲ್ಲುವ ಶಕ್ತಿ ಶಿಕ್ಷಣಕ್ಕಿದೆ. ಇಂದು ಉನ್ನತ ಶಿಕ್ಷಣವನ್ನು ಕಲಿಯಲು ಬಹಳಷ್ಟು ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಸಮಾಜಪರ ಮನೋಭಾವವನ್ನು ಬೆಳೆಸಿಕೊಂಡರೆ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯವು ಯುವ ವಿಶ್ವವಿದ್ಯಾಲಯವಾಗಿದ್ದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರೊಂದಿಗೆ ದೇಶದ ಪ್ರಮುಖ ವಿಶ್ವವಿದ್ಯಾಲಯದೊಂದಿಗೆ ಗುರುತಿಸಲ್ಟಟ್ಟಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಅವರು ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪದವಿ ಪ್ರದಾನ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅವರು ಸ್ವಾಗತಿಸಿ, ವಿಶ್ವವಿದ್ಯಾಲಯದ ಸಾಧನೆಯನ್ನು ಪರಿಚಯಿಸಿದರು. ಕಾರ್ಯ ಕ್ರಮದಲ್ಲಿ ವಿವಿಧ ವಿಭಾಗಗಳ ಡೀನ್, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಭಾಗವಹಿಸಿದ್ದರು.
34 ಮಂದಿಗೆ ಚಿನ್ನದ ಪದಕ
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 149 ಮಂದಿಗೆ ಪಿ.ಎಚ್‍ಡಿ, ಒಬ್ಬರಿಗೆ ಡಾಕ್ಟರ್ ಆಫ್ ಸಯನ್ಸ್, 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 98 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪಡೆದುಕೊಂಡರು. ವಿವಿಧ ಕೋರ್ಸ್‍ಗಳಲ್ಲಿ ಪ್ರಥಮ ರ್ಯಾಂಕ್ ಪಡೆದ 70 ಮಂದಿಗೆ ರ್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.
ಮಂಗಳೂರು ವಿಶ್ವವಿದ್ಯಾಲಯವು 2017-18ರಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಒಟ್ಟು 42,742 ವಿದ್ಯಾರ್ಥಿಗಳು ಹಾಜರಾಗಿದ್ದು 29,110 ವಿದ್ಯಾರ್ಥಿ ಗಳು ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ಪದವಿ ಪರೀಕ್ಷೆಗೆ 7.052 ವಿದ್ಯಾರ್ಥಿಗಳು ಹಾಜರಾಗಿದ್ದು 6,642 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
138 ಪಿ.ಎಚ್‍ಡಿ, 1 ಡಿಎಸ್ಸಿ, 1,189 ಸ್ನಾತಕೋತ್ತರ ಪದವಿ, 3,449 ಪದವಿ ಸೇರಿದಂತೆ ಒಟ್ಟು 4,777ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಖುದ್ದು ಹಾಜರಾಗಿ ಪದವಿ ಪಡೆದರು.
ಪದಕ, ನಗದು ಪುರಸ್ಕಾರದೊಂದಿಗೆ ಮಿಂಚಿದ ವಿದ್ಯಾರ್ಥಿಗಳು
ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಸೌಮ್ಯ ಕೆ ಅವರು 1 ಚಿನ್ನದ ಪದಕ 5 ನಗದು ಪುರಸ್ಕಾರ, ಇತಿಹಾಸ ವಿಭಾಗದಲ್ಲಿ ರಕ್ಷಿತಾ 2 ಚಿನ್ನದ ಪದಕ ದೊಂದಿಗೆ 3 ನಗದು ಪುರಸ್ಕಾರ, ಎಂಸಿಜೆ ವಿಭಾಗದಲ್ಲಿ ಅಶ್ವಿನ್ ಜೈನ್ ಅವರು 2 ಚಿನ್ನದ ಪದಕ ಹಾಗೂ 3 ನಗದು, ಎಂಎಸ್ಸಿಯಲ್ಲಿ ಗಣೇಶ್ ಕೃಷ್ಣ ಅವರು 2 ಚಿನ್ನದ ಪದಕ ಹಾಗೂ ಒಂದು ನಗದು ಪುರಸ್ಕಾರ, ರಸಾಯನಶಾಸ್ತ್ರ ವಿಭಾಗದಲ್ಲಿ ಸುಮಲತಾ 3 ಚಿನ್ನದ ಪದಕ ಹಾಗೂ 2 ನಗದು ಪುರಸ್ಕಾರ, ಎಂ.ಕಾಂ ನಲ್ಲಿ ಸುಮಾ ಅವರು ಎರಡು ಚಿನ್ನದ ಪದಕ ಹೀಗೆ ಹಲವು ವಿದ್ಯಾರ್ಥಿಗಳು ರ್ಯಾಂಕ್ ಚಿನ್ನದ ಪದಕ, ನಗದು ಪುರಸ್ಕಾರವನ್ನು ಪಡೆದು ಸಂಭ್ರಮಿಸಿದರು.
ಪಿಎಚ್‍ಡಿ ಪದವಿ ಪಡೆದ ವಿದೇಶಿಯರು
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿಯನ್ನು ಪೂರೈಸಿದ ರಿಗ್ವಾಂಡ ದೇಶದ ಡ್ಯುಕುಝಿಯಾ ಟ್ಯುರೇಮಿಯಾ ಪಿಯಾರ್ರೆ, ದುಸೈಡಿ ಒಡೆಟ್ಟಿ, ರುಸಗರ ಜೀನ್ ಬೋಸ್ಟಾ, ಇಯೋಲಾರಿಯ ಮುಟಾಮುಡಿಯಾ ಸೇರಿದಂತೆ ಒಟ್ಟು ಆರು ಜನ ವಿದೇಶಿ ವಿದ್ಯಾಥಿಗಳು ಪಿಎಚ್‍ಡಿ ಪದವಿಯನ್ನು ಪಡೆದುಕೊಂಡರು.