ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಭರದ ಸಿದ್ಧತೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎ. 13ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯೊಂದಿಗೆ ಭರದ ಸಿದ್ಧತೆ ನಡೆಸಲಾಗಿದೆ. ನಗರದ ನೆಹರೂ ಮೈದಾನದಲ್ಲಿ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಆಸನದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಮೈದಾನದ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಪ್ರಧಾನಿ ಅವರ ವಾಹನ ಹಾದು ಹೋಗುವ ರಸ್ತೆಗಳಲ್ಲಿಯೂ ಅತ್ಯಧಿಕ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಚಾರ ಸಭೆಗೆ ಬರುವವರನ್ನು ಮುಖ್ಯ ಪ್ರವೇಶ ದ್ವಾರ ಸೇರಿದಂತೆ ಒಟ್ಟು ಆರು ಕಡೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ನರೇಂದ್ರ ಮೋದಿಯವರು ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಕೇಂದ್ರ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ 60 ಅಡಿ ಉದ್ದ, 40 ಅಡಿ ಅಗಲದ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಈ ವೇದಿಕೆಯಲ್ಲಿ ಮೋದಿಯವರೊಂದಿಗೆ ದ.ಕ. ಮತ್ತು ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಮತ್ತು ಇತರ ನಾಯಕರು ಆಸೀನರಾಗಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ದ.ಕ., ಉಡುಪಿ, ಕಾಸರಗೋಡಿನಿಂದ ಒಟ್ಟು ಒಂದೂವರೆ ಲಕ್ಷಕ್ಕೂ ಮೀರಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಲಕ್ಷಾಂತರ ಜನ ಸೇರುವುದರಿಂದ ಎಲ್ಲರಿಗೂ ಮೋದಿಯವರ ಭಾಷಣ ವೀಡಿಯೊ ಸಹಿತ ವೀಕ್ಷಿಸುವಂತಾಗಲು ಆರು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಸಭಾ ಕಾರ್ಯಕ್ರಮಕ್ಕೂ ಮುನ್ನ ಜಗದೀಶ್ ಪುತ್ತೂರು ಅವರಿಂದ ದೇಶಭಕ್ತಿಗೀತೆಗಳ ಗಾಯನವಿರಲಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಶಾಮಿಯಾನ ವ್ಯವಸ್ಥೆ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮೈದಾನದಲ್ಲಿ ಈಗಾಗಲೇ ಶಾಮಿಯಾನ ಅಳವಡಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಜ್ಜಿಗೆ, ತಂಪು ಪಾನೀಯ ಅಥವಾ ಇತರ ಆಹಾರ ವಸ್ತುಗಳನ್ನು ಕೊಡಲಾಗುವುದಿಲ್ಲ. ಆದರೆ ಮೈದಾನದಲ್ಲಿ ಕುಡಿಯುವ ನೀರು ಇರಲಿದೆ.
ವಿಶೇಷ ಭದ್ರತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ವಿಶೇಷ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಪ್ರಧಾನಿ ಅವರ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಶೇಷ ಭದ್ರತಾ ದಳದ (ಎಸ್‌ಪಿಜಿ) ಉನ್ನತ ಅಧಿಕಾರಿಗಳು ಕಳೆದ ಬುಧವಾರವೇ ಮಂಗಳೂರಿಗೆ ಆಗಮಿಸಿ, ಕಾರ್ಯಕ್ರಮ ನಡೆಯುವ ಕೇಂದ್ರ ಮೈದಾನದ ಸಿದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೆ, ಮಂಗಳೂರು ಅಂ. ವಿಮಾನ ನಿಲ್ದಾಣ ಹಾಗೂ ಅಲ್ಲಿಂದ ಕೇಂದ್ರ ಮೈದಾನಕ್ಕೆ ಆಗಮಿಸುವ ರಸ್ತೆ ಮಾರ್ಗದ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಿದ್ದಾರೆ.
ನಾಯಕರಿಂದ ಸಿದ್ಧತೆ ವೀಕ್ಷಣೆ
ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಕೇಂದ್ರ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ಇದರ ಸಿದ್ಧತೆಯನ್ನು ಶುಕ್ರವಾರ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರು ವೀಕ್ಷಿಸಿದರು.
ಬಿಜೆಪಿ ಚುನಾವಣಾ ಉಸ್ತುವಾರಿ, ಶಾಸಕ ವಿ.ಸುನಿಲ್ ಕುಮಾರ್, ಶಾಸಕ ಡಾ.ವೈ.ಭರತ್ ಶೆಟ್ಟಿ ಕೂಡಾ ಉಪಸ್ಥಿತರಿದ್ದು, ಸಿದ್ಧತೆಗಳನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸುನೀಲ್ ಕುಮಾರ್ ಅವರು, 1861 ಬೂತ್‌ಗಳಿಂದ ಬಿಜೆಪಿ ಕಾರ್ಯಕರ್ತರು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲೆ ಬರೆಯುವ ರೀತಿಯ ರಾಜಕೀಯ ಸಮಾವೇಶವಾಗಿ ಇದು ಬದಲಾವಣೆಗೊಳ್ಳಲಿದೆ ಎಂದರು.
3 ಗಂಟೆಗೆ ಸಭೆ ಆರಂಭ: 4.15ರ ಸುಮಾರಿಗೆ ಪ್ರಧಾನಿ ವೇದಿಕೆಗೆ !
ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. ರಾಜ್ಯದ ಪ್ರಮುಖ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 4.15ರ ಸುಮಾರಿಗೆ ಪ್ರಧಾನಿ ಮೋದಿ ಅವರು ವೇದಿಕೆಗೆ ಆಗಮಿಸಲಿದ್ದಾರೆ. ದ.ಕ. ಬಿಜೆಪಿ ವತಿಯಿಂದ ಸನ್ಮಾನದ ಬಳಿಕ ಪ್ರಧಾನಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2 ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈ ಸಭೆಗೆ ಸಾಕ್ಷಿಯಾಗಲಿದ್ದಾರೆ. 2014ರ ಮೋದಿ ಸಭೆಗಿಂತಲೂ ದೊಡ್ಡ ಮಟ್ಟದ ಸಭೆ ಇದಾಗಲಿದ್ದು, ಪರಿಣಾಮವಾಗಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗೊಳಿಸಲಿದ್ದಾರೆ ಎಂದವರು ಹೇಳಿದರು.
ಚೌಕೀದಾರ್ ಗೆಟಪ್‌ನಲ್ಲಿ ಬರಲಿದ್ದಾರೆ ಕಾರ್ಯಕರ್ತರು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಹೆಚ್ಚು ಚರ್ಚಿತವಾಗುತ್ತಿರುವ ‘ಚೌಕಿದಾರ್’ ಎಂಬ ನೆಲೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಚೌಕಿದಾರ್ ಗೆಟಪ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಬೇರೆ ಬೇರೆ ಮೂಲೆಯ ಕಾರ್ಯಕರ್ತರು ಇದೇ ಲುಕ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.