ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ: ಡಾ.ಸೆಲ್ವಮಣಿ
ಮಂಗಳೂರು, ಎ.12: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಯು ಎ.18ರಂದು ನಡೆಯಲಿದೆ. ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ವೈವಿಧ್ಯತೆಯೊಂದಿಗೆ ಸಂಘಟಿಸುತ್ತಾ ಬಂದಿದೆ. ಈ ಬಾರಿ ಲೋಕಸಭಾ ಚುನಾವಣೆಯನ್ನು ದೇಶದ ಮಹಾಉತ್ಸವ ಎಂಬ ಗುರಿಯೊಂದಿಗೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಸೆಲ್ವಮಣಿ ಹೇಳಿದ್ದಾರೆ.
ಜಿಲ್ಲೆಯಲ್ಲಿರುವ 1,861 ಮತ ಕೇಂದ್ರಗಳು ಈ ಉತ್ಸವದ ಪ್ರಧಾನ ನೆಲೆಗಳಾಗಿರುತ್ತವೆ. ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಸರ್ವ ಸಹಕಾರ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಜಲ ಪ್ರೇರಕರು ಹಾಗೂ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಎ.14ರಂದು ಎಲ್ಲ ಮತಕೇಂದ್ರಗಳನ್ನು ಜಿಲ್ಲೆಯ ಮಹಾ ಉತ್ಸವಕ್ಕೆ ನಿರ್ಮಲ ಹಾಗೂ ಸುಂದರ ಕೇಂದ್ರಗಳನ್ನಾಗಿ ಪರಿವರ್ತಿಸುತ್ತಾರೆ ಎಂದರು.
ಆ ದಿನ ಪರಿಸರ ನಿರ್ಮಲಗೊಳಿಸುವುದು, ಕುಡಿಯುವ ನೀರ ಮೂಲಗಳನ್ನು ಸೇರಿ ಸರ್ವವನ್ನು ಸಿದ್ಧಗೊಳಿಸಲಾಗುವುದು. ಈ ಮಹಾಹಬ್ಬದ ತಯಾರಿಯಲ್ಲಿ ಸರ್ವರೂ ಕೈ ಜೋಡಿಸಿ ಹೊಸ ಇತಿಹಾಸ ನಿರ್ಮಿಸ ಬನ್ನಿ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಕರೆ ನೀಡಿದ್ದಾರೆ.
ಈ ಪ್ರಯುಕ್ತ ಎಲ್ಲ ಇಲಾಖಾ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ, ವೀಡಿಯೊ ಸಂವಾದ ಮೂಲಕ ಮಾರ್ಗದರ್ಶನ ನೀಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.