ಅಸಾಂಜ್‌ಗೆ ಮರಣ ದಂಡನೆಗೆ ಆಸ್ಟ್ರೇಲಿಯ ವಿರೋಧ

Update: 2019-04-12 16:32 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಎ. 12: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಅಮೆರಿಕಕ್ಕೆ ಗಡಿಪಾರು ಮಾಡಿದರೆ, ಅವರಿಗೆ ಮರಣ ದಂಡನೆ ವಿಧಿಸುವುದನ್ನು ವಿರೋಧಿಸುವುದಾಗಿ ಆಸ್ಟ್ರೇಲಿಯ ಶುಕ್ರವಾರ ಹೇಳಿದೆ.

ಅದೇ ವೇಳೆ, ಅಸಾಂಜ್‌ರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಸಿಡ್ನಿಯಲ್ಲಿ ಧರಣಿ ನಡೆಸಿದ್ದಾರೆ ಹಾಗೂ ಆಸ್ಟ್ರೇಲಿಯದ ಪತ್ರಕರ್ತರ ಒಕ್ಕೂಟವು ಅವರನ್ನು ಬಲವಾಗಿ ಬೆಂಬಲಿಸಿದೆ.

ಆಸ್ಟ್ರೇಲಿಯ ಪ್ರಜೆಯಾಗಿರುವ ಅಸಾಂಜ್‌ರನ್ನು ಲಂಡನ್ ಪೊಲೀಸರು ಗುರುವಾರ ಲಂಡನ್‌ನಲ್ಲಿರುವ ಇಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಬಂಧಿಸಿದ್ದಾರೆ. ಅವರು ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂಬುದಾಗಿ ನ್ಯಾಯಾಲಯವೊಂದು ಹೇಳಿದೆ.

ಸರಕಾರಿ ರಹಸ್ಯಗಳನ್ನು ಹೊರಗೆಡವಲು ಪಿತೂರಿ ಮಾಡಿದ ಆರೋಪವನ್ನು ಅವರು ಅಮೆರಿಕದಲ್ಲಿ ಎದುರಿಸುತ್ತಿದ್ದಾರೆ.

ಅಸಾಂಜ್‌ರ ಯಾವುದೇ ಗಡಿಪಾರು ವಿಚಾರವು ಆಸ್ಟ್ರೇಲಿಯಕ್ಕೆ ಸಂಬಂಧಿಸಿದ್ದಲ್ಲ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಹೇಳಿದರು. ಅಸಾಂಜ್ ಆಸ್ಟ್ರೇಲಿಯದ ಕೌನ್ಸುಲರ್ ಅಧಿಕಾರಿಗಳಿಂದ ಸಾಮಾನ್ಯ ನೆರವನ್ನು ಮಾತ್ರ ಪಡೆಯುತ್ತಾರೆ ಎಂದರು.

ಅದೇ ವೇಳೆ, ಅಮೆರಿಕದಲ್ಲಿ ಅಸಾಂಜ್ ಎದುರಿಸಬೇಕಾದ ಶಿಕ್ಷೆಯ ಬಗ್ಗೆ ಅವರ ಬೆಂಬಲಿಗರು ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಆಸ್ಟ್ರೇಲಿಯ ವಿದೇಶ ಸಚಿವೆ ಮ್ಯಾರಿಸ್ ಪೇನ್, ಮರಣ ದಂಡನೆಗೆ ಆಸ್ಟ್ರೇಲಿಯ ಸಂಪೂರ್ಣ ವಿರುದ್ಧವಾಗಿದೆ ಎಂದರು.

ಅಸಾಂಜ್‌ರನ್ನು ಗಡಿಪಾರು ಮಾಡಿದರೆ ಅವರಿಗೆ ಮರಣ ದಂಡನೆ ನೀಡುವುದಿಲ್ಲ ಎಂಬ ಭರವಸೆಯನ್ನು ಬ್ರಿಟನ್ ಅಮೆರಿಕದಿಂದ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News