ಉ. ಕೊರಿಯ ವಿರುದ್ಧದ ದಿಗ್ಬಂಧನಗಳ ಮುಂದುವರಿಕೆ: ಟ್ರಂಪ್

Update: 2019-04-12 16:49 GMT

ವಾಶಿಂಗ್ಟನ್, ಎ. 12: ಉತ್ತರ ಕೊರಿಯದ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳು ಮುಂದುವರಿಯುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಈ ದಿಗ್ಬಂಧನಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶ್ವೇತಭವನದಲ್ಲಿ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಜೊತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘‘ಆರ್ಥಿಕ ದಿಗ್ಬಂಧನಗಳು ಮುಂದುವರಿಯಬೇಕೆಂದು ನಾವು ಬಯಸುತ್ತೇವೆ’’ ಎಂಬುದಾಗಿ ಹೇಳಿದ್ದಾರೆ ಎಂಬುದಾಗಿ ಶ್ವೇತಭವನ ಪತ್ರಕರ್ತರು ಮಾಧ್ಯಮಗಳಿಗೆ ಇಮೇಲ್ ಮೂಲಕ ಕಳುಹಿಸಿದ ವರದಿಗಳಲ್ಲಿ ಹೇಳಿದ್ದಾರೆ.

ಉತ್ತರ ಕೊರಿಯ ವಿರುದ್ಧದ ದಿಗ್ಬಂಧನಗಳು ಈಗ ನ್ಯಾಯೋಚಿತ ಮಟ್ಟದಲ್ಲಿವೆ ಎಂದು ಹೇಳಿದ ಟ್ರಂಪ್, ‘‘ಮಹತ್ವದ ಘಟನೆಯೊಂದು ನಡೆಯುತ್ತದೆ ಎಂದು ನಾನು ಭಾವಿಸಿದ್ದೇನೆ. ದಿಗ್ಬಂಧನಗಳನ್ನು ನಾವು ಹೆಚ್ಚಿಸಬಹುದು, ಆದರೆ, ನಾನು ಹಾಗೆ ಮಾಡಲು ಇಚ್ಛಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News