ಪ್ರವಾದಿ ನಿಂದನೆ ಮಾಡಿದ್ದಾರೆನ್ನಲಾದ ಪ್ರಕರಣ: ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸ್ವೀಕೃತ
ಮಂಗಳೂರು, ಎ.12: ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಪ್ರವಾದಿ ನಿಂದನೆ ಮಾಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಮೇಲ್ಮನವಿ ಸ್ವೀಕೃತಗೊಂಡಿದೆ.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯ ಘಟಕದ ಕಾನೂನು ವಿಭಾಗದಿಂದ ನೀಡಿದ ಎಲ್ಲ ದಾಖಲೆಗಳನ್ನು ಆಧರಿಸಿ ಅಡ್ವೊಕೇಟ್ ಮುಹಮ್ಮದ್ ಉಮರ್ ಫಾರೂಕ್ ನೇತೃತ್ವದಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಮೇಲ್ಮನವಿ ಸ್ವೀಕೃತಗೊಂಡಿದೆ’ ಎಂದು ಅಡ್ವೊಕೇಟ್ ಅಶ್ರಫ್ ಅಗ್ನಾಡಿ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತ ಮುಹಮ್ಮದ್ ಶರೀಫ್ ಪಾಂಡೇಶ್ವರ ಎಂಬವರು ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಪ್ರವಾದಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ನಿರೂಪಕನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಿರೂಪಕನ ಬಂಧಿಸಲು ಪ್ರತಿಭಟನೆಗಳು ನಡೆದಿದ್ದವು.
ಏತನ್ಮಧ್ಯೆ ಪ್ರಕರಣವನ್ನು ರದ್ದುಗೊಳಿಸಲು ಆರೋಪಿ ಅಜಿತ್ ಹನುಮಕ್ಕನವರ್ ಪರ ವಕೀಲರು ಬೆಂಗಳೂರಿನ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಮ್ಯೂನಲ್ ಪಿಟಿಷನ್ 6/2019ರಂತೆ ನೋಂದಣಿಯಾಗಿತ್ತು. ನ್ಯಾಯಮೂರ್ತಿ ಅರವಿಂದಕುಮಾರ್ ನೇತೃತ್ವದ ಪೀಠ ಪ್ರಕರಣವನ್ನು ರದ್ದುಗೊಳಿಸಿತ್ತು.
ಪ್ರಕರಣವನ್ನು ರದ್ದುಗೊಳಿಸಿರುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಪಿಎಫ್‌ಐ ರಾಜ್ಯ ಘಟಕದ ಕಾನೂನು ವಿಭಾಗದಲ್ಲಿ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಯಿತು. ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಅಡ್ವೊಕೇಟ್ ಮುಹಮ್ಮದ್ ಉಮರ್ ಫಾರೂಕ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ನೋಂದಣಿಯಾಗಿದ್ದು, ಶೀಘ್ರದಲ್ಲೇ ಎಸ್‌ಎಲ್‌ಪಿ (Special Leave Petition) ಅರ್ಜಿ ಸ್ವೀಕೃತಗೊಳ್ಳುತ್ತದೆ. ಸವೋರ್ಚ್ಚ ನ್ಯಾಯಾಲಯವು ರಾಜ್ಯ ಸರಕಾರ ಹಾಗೂ ಆರೋಪಿಗೆ ನೋಟಿಸ್‌ಗಳನ್ನು ರವಾನಿಸುತ್ತದೆ. ಆನಂತರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಅವರು ತಿಳಿಸಿದರು.