ಮೆಹಬೂಬಾ, ಒಮರ್, ಫಾರೂಕ್ ಚುನಾವಣೆ ಸ್ಪರ್ಧೆ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Update: 2019-04-12 17:21 GMT

ಹೊಸದಿಲ್ಲಿ, ಎ.12: ಕಾಶ್ಮೀರದ ಮುಖಂಡರಾದ ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸುವಂತೆ ನ್ಯಾ. ರವೀಂದ್ರ ಭಟ್ ನೇತೃತ್ವದ ವಿಭಾಗೀಯ ಪೀಠವು ಅರ್ಜಿದಾರರಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಾಸು ಪಡೆದಿದ್ದಾರೆ.

ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ನ ಈ ಮೂವರು ಮುಖಂಡರು ಭಾರತೀಯ ಸಂವಿಧಾನದ ಬದಲು ಬೇರೆಡೆ ನಿಷ್ಠೆ ವ್ಯಕ್ತಪಡಿಸಿದ್ದಾರೆ. ಈ ಮೂವರು ನಾಯಕರ ಕೋಮು ಹೇಳಿಕೆ ಭಾರತದ ಸಂವಿಧಾನಕ್ಕೆ ವಿರೋಧವಾಗಿದ್ದು, ಲೋಕಸಭೆಗೆ ಇವರ ಪ್ರವೇಶಕ್ಕೆ ನಿಷೇಧ ಹೇರಬೇಕು. ಭಾರತ ಮಾತೆಯನ್ನು ಧರ್ಮದ ಆಧಾರದಲ್ಲಿ ವಿಭಜಿಸಬೇಕು ಹಾಗೂ ಕಾಶ್ಮೀರಕ್ಕೆ ಒಂದು, ದೇಶದ ಇತರೆಡೆ ಇನ್ನೊಂದು ಪ್ರಧಾನಿಯ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಇವರು ಸ್ಪರ್ಧಿಸಿದರೆ ಅದು ಪ್ರಜಾಪ್ರಭುತ್ವದ ಅಣಕವಾಗುತ್ತದೆ. ಆದ್ದರಿಂದ ಅವರ ಸ್ಪರ್ಧೆಗೆ ನಿಷೇಧ ಹೇರುವ ಜೊತೆಗೆ ಅವರ ವಿರುದ್ಧ ದೇಶದ್ರೋಹದ ಸಹಿತ ವಿವಿಧ ಆರೋಪ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News