ತಲೆಬುರುಡೆಯ ಮಾಂಸ ತಿನ್ನುತ್ತಿದ್ದ ರೋಗಕ್ಕೆ ಯಶಸ್ವಿ ಚಿಕಿತ್ಸೆ: ಮುಕ್ಕ ಶ್ರೀನಿವಾಸ್ ಆಸ್ಪತ್ರೆ ವೈದ್ಯರಿಂದ ಸಾಧನೆ

Update: 2019-04-12 17:30 GMT

ಸುರತ್ಕಲ್, ಎ.12: ಮುಕ್ಕದಲ್ಲಿರುವ ಶ್ರೀನಿವಾಸ ವೈದ್ಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ತಲೆಬುರುಡೆಯ ಮಾಂಸ ತಿನ್ನುತ್ತಿದ್ದ ರೋಗಕ್ಕೆ ಒಳಗಾಗಿದ್ದ ಮಧ್ಯ ವಯಸ್ಕ ರೋಗಿಯೊಬ್ಬರನ್ನು ತಿಂಗಳ ಅವಧಿಯ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯ ಡಾ. ಅರವಿಂದ ನಾಯಕ್ ಮಾಹಿತಿ ನೀಡಿದರು.

ಸುರತ್ಕಲ್‌ನ 45 ವರ್ಷದ ಲೂಕ್ ರಿಚರ್ಡ್ ಎಂಬ ರೋಗಿಯು ತಲೆಬುರುಡೆಯಲ್ಲಿ ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿದ್ದರು. ಆದರೆ ಆ ಬಳಿಕ ಈ ಕಾಯಿಲೆ ಉಲ್ಬಣಗೊಂಡಿತು. ಮತ್ತು ಜೀವಕ್ಕೆ ಅಪಾಯ ತರುವಂತಹ ಗ್ಯಾಂಗ್ರೀನ್ ಆಗುವ ಮಟ್ಟಕ್ಕೆ ತೀವ್ರಗೊಂಡಿತು. ಈ ಪರಿಸ್ಥಿತಿಯನ್ನು ಮಾಂಸ ತಿನ್ನುವ ರೋಗವೆಂದು ಸಾಮಾನ್ಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ ಎಂದರು.

ಈ ಸೋಂಕು ದೇಹದ ಮೃದು ಅಂಗಾಂಶಗಳನ್ನು ಕೊಲ್ಲುತ್ತದೆ. ಈ ಸೋಂಕು ತಲೆಬುರುಡೆಯಲ್ಲಿ ಕಾಣಿಸಿಕೊಂಡು ಅಪಾಯದ ಪ್ರಮಾಣ ಮತ್ತು ಸಂಕೀರ್ಣತೆಯ ಪ್ರಮಾಣ ಹೆಚ್ಚಿತ್ತು. ಇದಲ್ಲದೆ ರೋಗಿಯು ಮಧುಮೇಹದಿಂದ ಬಳಲುತ್ತಿರುವುದು ಕೂಡಾ ಪತ್ತೆಯಾಯಿತು. ಇದು ಕಾಯಿಲೆ ಉಲ್ಬಣಗೊಳ್ಳುವ ಅಪಾಯವನ್ನು ತಂದಿತ್ತು ಎಂದು ಹೇಳಿದರು.

ಸೋಂಕು ತಗಲಿದ್ದ ನೆತ್ತಿಯ ಕವಚವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ವೆರೋಫ್ಲೋ ತಂತ್ರಜ್ಞಾನದ ಮೂಲಕ ಒತ್ತಡವನ್ನು ಒದಗಿಸಿ ಗಾಯ ಗುಣಮಾಡುವ ಚಿಕಿತ್ಸೆಯನ್ನು ನೀಡಿ ಸೋಂಕನ್ನು ನಿಯಂತ್ರಿಸಲಾಯಿತು. ಚಿಕಿತ್ಸೆ ಬಳಿಕ 10 ದಿನದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು ಎಂದು ವಿವರಿಸಿದರು.

ಸಂಸ್ಥೆಯ ಪ್ಲಾಸ್ಟಿಕ್ ಮತ್ತು ಅಂಗ ಪುನರಚನಾ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ತಜ್ಞ ವೈದ್ಯ, ಡಾ. ಅದಿಲ್ ಆಲಿ ಮಾತನಾಡಿ, ಚರ್ಮ ಅಂಗಾಂಶ ಕಸಿಯನ್ನು ಮಾಡಲಾಯಿತು. ರೋಗಿಯಲ್ಲಿದ್ದ ಇಚ್ಚಾಶಕ್ತಿ ಮತ್ತು ಚಿಕಿತ್ಸೆ ನೀಡುತ್ತಿದ್ದ ವೈದ್ಯರಲ್ಲಿ ಅವರು ಹೊಂದಿದ್ದ ವಿಶ್ವಾಸ, ನಂಬಿಕೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರೀತಿ ಮತ್ತು ಆಹಾರ ಪಥ್ಯದ ಅನುಸರಣೆ ಗಾಯ ತ್ವರಿತವಾಗಿ ಗುಣವಾಗುವಲ್ಲಿ ನೆರವಾಯಿತು ಎಂದರು.

ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಪಿ.ಸತ್ಯಮೂರ್ತಿ ಐತಾಳ, ಡಾ.ಅಮರ್ ಡಿ.ಎನ್., ಡಾ. ಸತ್ಯಜಿತ್ ಕಾರಂತ, ಡಾ. ಪ್ರಶಾಂತ ಕುಮಾರ್, ಡಾ.ದೀಪಕ್, ಡಾ.ವಿಜೇತಾ, ವೈದ್ಯಕೀಯ ವಿಭಾಗದ ಡಾ.ಅನಿತಾ ಸಿಕ್ವೆರಾ ಮತ್ತು ಡಾ.ಸಂಗೀತಾ ಚಿಕಿತ್ಸೆಗೆ ನೆರವು ನೀಡಿದ್ದಾರೆ ಎಂದರು.

ಶ್ರೀನಿವಾಸ್ ವೈದ್ಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರವು ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಶಾಮರಾವ್, ಡಾ.ಅನಿತಾ ಸಿಕ್ವೆರಾ, ಚಿಕಿತ್ಸೆ ಪಡೆದ ಲೂಕ್ ರಿಚರ್ಡ್, ಮಾಧ್ಯಮ ಸಂಪರ್ಕ ವಿಭಾಗದ ಭಾಸ್ಕರ ಅರಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News