ಮೋದಿ ಸೋಲಿನಲ್ಲಿದೆ ದೇಶದ ಭವಿಷ್ಯ: ಮುನೀರ್ ಕಾಟಿಪಳ್ಳ
ಮಂಗಳೂರು, ಎ.12: ದೇಶದ ಇಂದಿನ ದುಃಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿಯ ಶ್ರೀಮಂತರ ಪರವಾದ ಆಡಳಿತದ ನೀತಿಗಳೇ ನೇರ ಕಾರಣ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಸೋಲಿಸುವುದರಲ್ಲಿ ದೇಶದ ಭವಿಷ್ಯ ಅಡಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಂಗಳೂರು ಸಮೀಪದ ಹರೇಕಳದಲ್ಲಿ ಶುಕ್ರವಾರ ರಾತ್ರಿ ನಡೆದ ಡಿವೈಎಫ್‌ಐ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಐದು ವರ್ಷಗಳ ಮೋದಿ ಆಡಳಿತ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕಂಪೆನಿಗಳ ಪಾಲಿನ ಸುವರ್ಣ ಯುಗವಾಗಿದೆ. ಕಾರ್ಮಿಕರ, ನೌಕರರ, ಶ್ರಮಜೀವಿಗಳನ್ನು ಹಸಿವಿಗೆ ತಳ್ಳಿದ ಕೀರ್ತಿ ಮೋದಿ ಆಡಳಿತದ್ದಾಗಿದೆ. ಈ ಐದು ವರ್ಷಗಳಲ್ಲಿ ಅಂಬಾನಿ, ಅದಾನಿಗಳ ಸಂಪತ್ತು ಹಲವು ಪಟ್ಟು ಏರಿದರೆ, ಜನಸಾಮಾನ್ಯರ ತಲಾ ಆದಾಯ ಕುಸಿದಿದೆ. ಮೋದಿ ಆಡಳಿತದಲ್ಲಿ ಹಸಿವಿನ ಸಾವುಗಳಂತಹ ಅಮಾನವೀಯ ಘಟನೆಗಳು ವರದಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸೋಲಿಸಲು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ರಫೀಕ್ ಹರೇಕಳ, ಇಸ್ಮಾಯೀಲ್ ಹರೇಕಳ, ಪಂಚಾಯತ್ ಸದಸ್ಯರಾದ ಅಶ್ರಫ್, ಹನೀಫ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.