ಹಿಂದೂ-ಮುಸ್ಲಿಂ ನಡುವೆ ಧ್ವೇಷ ಸೃಷ್ಠಿಸುವುದು ಬಿಜೆಪಿ ಕಾಂಗ್ರೆಸ್ ಸಾಧನೆ: ಸಿದ್ದೀಕ್ ಪುತ್ತೂರು

Update: 2019-04-15 12:34 GMT

ಪುತ್ತೂರು: ಐಕ್ಯತೆಯಿಂದ ಬದುಕುತ್ತಿದ್ದ ಹಿಂದೂ ಮತ್ತು ಮುಸ್ಲಿಮರ ನಡುವೆ ಧ್ವೇಷ ಸೃಷ್ಠಿಸಿ ರಾಜಕೀಯ ಲಾಭ ಪಡೆದುಕೊಂಡಿರುವುದೇ ಬಿಜೆಪಿ ಮತ್ತು ಕಾಂಗ್ರೆಸ್ ಸಾಧನೆಯಾಗದೆ. ಐಕ್ಯತೆಯನ್ನು ಬಯಸುವವರು ಮತ್ತೆ ಅವರಿಗೆ ಅವಕಾಶ ನೀಡದೆ ಎಸ್‍ಡಿಪಿಐಯನ್ನು ಬೆಂಬಲಿಸಿ ಎಂದು ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ಹೇಳಿದರು.

ಅವರು ಸೋಮವಾರ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚೌಕಿದಾರ ಪ್ರಧಾನಿಯಿಂದ ಅವರಿಂದ ಅಂಬಾನಿ ಅದಾನಿಯವರಿಗೆ ಲಾಭವಾಗಿದೆ ಹೊರತು ದೇಶದ ಜನತೆಗೆ ಯಾವುದೇ ಲಾಭವಾಗಿಲ್ಲ. ನೋಟ್‍ಬ್ಯಾನ್‍ನಿಂದಾಗಿ ಹಲವಾರು ಮಂದಿಯ ಜೀವ ಹೋಗಿದೆಯೇ ವಿನಹ ಯಾವುದೇ ಕಪ್ಪು ಹಣ ಸಿಕ್ಕಿಲ್ಲ, ದೇಶಕ್ಕೆ ಪ್ರಯೋಜನವಾಗಿಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಭ್ರಷ್ಟಾಚಾರಕ್ಕಿಂತಲೂ ಅಧಿಕ ಕಳೆದ 5 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಝ್ ಶರೀಫ್ ಅವರ ಮಗಳ ಮದುವೆಗೆ ಹೋಗಿರುವ ಪ್ರಧಾನಿ ಮೋದಿಯವರು ಇಲ್ಲಿ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡುವ ಕಪಟ ನಾಟಕವಾಡುತ್ತಿದ್ದಾರೆ. ಮೋದಿ ಪ್ರಧಾನಿಯಾಗಲಿ ಎಂದು ಪಾಕಿಸ್ತಾನದ ಪ್ರದಾನಿ ನವಾಝ್ ಶರೀಫ್ ಹೇಳಿಕೆ ನೀಡಿರುವುದು ಮೋದಿಯನ್ನು ಜನರು ಅರ್ಥ ಮಾಡಿಕೊಳ್ಳಲು ಅಷ್ಟು ಸಾಕು. ಮೋದಿ ಮತ್ತೆ ಪ್ರಧಾನಿಯಾದಲ್ಲಿ ಅದು ದೇಶಕ್ಕಾಗುವ ನಷ್ಟವಾಗಿದೆ. ಚೌಕೀದಾರರನ್ನು ಬದಲಾಯಿಸಿ ಅಭಿವೃದ್ಧಿ ಪರವಿರುವ ಎಸ್‍ಡಿಪಿಐಯನ್ನು ಬೆಂಬಲಿಸಿ ಎಂದರು. 

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ವಾರ್ಷಿಕ 72 ಸಾವಿರದಂತೆ 5 ಕೋಟಿ ಬಡವರಿಗೆ ಹಣ ನೀಡುವುದಾಗಿ ತಿಳಿಸಿದೆ. ಇದೊಂದು ರಾಹುಲ್ ಗಾಂಧಿಯವರ ಸುಳ್ಳು ಭರವಸೆಯಾಗಿದ್ದು, ಇಷ್ಟೊಂದು ಹಣ ದೇಶದ ಖಜಾನೆಯಲ್ಲಿದೆಯೇ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಯ ಈ ಪೊಳ್ಳು ಭರವಸೆಗೆ ಮತದಾರರು ಮರುಳಾಗಬಾದರು ಎಂದು ಅವರು ತಿಳಿಸಿದರು. 

ಕಾಂಗ್ರೆಸ್ ಸೋಲಿಸಲು ಎಸ್‍ಡಿಪಿಐ ಪ್ರಯತ್ನ ನಡೆಸುತ್ತಿದೆ ಎಂದು ನಮ್ಮ ಪಕ್ಷದ ಮೇಲೆ ಆರೋಪಿಸಲಾಗುತ್ತಿದೆ. ಆದರೆ ಬಿಜೆಪಿಯನ್ನು ದೇಶದಲ್ಲಿ ಇಷ್ಟೊಂದು ಬೆಳೆಸುವಲ್ಲಿ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ಜಾತ್ಯಾತೀತ ನಿಲುವಿನ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ಅವರು ತಡೆಯಬಹುದಿತ್ತು. ಆದರೆ ಬಿಜೆಪಿಯನ್ನು ಪರೋಕ್ಷವಾಗಿ ಬೆಳಸಿ ಇದೀಗ ಎಸ್‍ಡಿಪಿಐ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ಕೆ.ಎಸ್. ಉಮ್ಮರ್, ಇಫಾಝ್ ಬನ್ನೂರು, ಯಹ್ಯಾ ಕೂರ್ನಡ್ಕ, ಉಮ್ಮರ್ ಕೂರ್ನಡ್ಕ, ಆಶ್ರಫ್ ಭಾವು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News