ಕೋಟಿಚೆನ್ನಯ, ನಾರಾಯಣ ಗುರುಗಳನ್ನು ರಾಜಕೀಯಕ್ಕೆ ಎಳೆದು ತರಬೇಡಿ: ಪ್ರಧಾನಿ ಮೋದಿಗೆ ಜೆಡಿಎಸ್ ತಾಕೀತು

Update: 2019-04-15 12:54 GMT

ಮಂಗಳೂರು, ಎ.15: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆದ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಕೋಟಿ ಚೆನ್ನಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರುಗಳನ್ನು ರಾಜಕೀಯಕ್ಕೆ ಎಳೆದು ತರುವುದು ಬೇಡ ಎಂದು ಜೆಡಿಎಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ತಾಕೀತು ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜೆಡಿಎಸ್‌ನ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ, ಬಿಲ್ಲವರ ಮತಗಳಿಕೆಗೆ ಮಾತ್ರ ಇಂತಹ ಓಲೈಕೆಯ ತಂತ್ರವನ್ನು ಮಾಡುವ ಬಿಜೆಪಿ, ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ಹಿಂದೇಟು ಹಾಕಿದೆ. ಬಿಲ್ಲವ ಸಮುದಾಯ ಅದರಲ್ಲೂ ಮುಖ್ಯವಾಗಿ ಯುವಕರು ಇದನ್ನು ತಿಳಿದುಕೊಳ್ಳಬೇಕು ಎಂದರು.

ಕೋಟಿ ಚೆನ್ನಯರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಇತಿಹಾಸ ಗೊತ್ತಿಲ್ಲದೇ ಪ್ರಧಾನಿ ಈ ಪ್ರಸ್ತಾಪವನ್ನು ಮಾಡುತ್ತಾರೆ. ಬಿಜೆಪಿಗೆ ನಿಜವಾಗಿಯೂ ಬಿಲ್ಲವ ಸಮುದಾಯದ ಮೇಲೆ ಅಭಿಮಾನವಿದ್ದರೆ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಲಿ ಎಂದರು.

ಕಾಂಗ್ರೆಸ್‌ನಲ್ಲಿ ಬಿ.ಕೆ. ಹರಿಪ್ರಸಾದ್, ಮಧು ಬಂಗಾರಪ್ಪ ಅವರಂತಹ ನಾಯಕರು ಚುನಾವಣೆಯ ಅಖಾಡಕ್ಕೆ ಧುಮುಕಿದ್ಧಾರೆ. ಆದರೆ ಬಿಜೆಪಿ ಬಿಲ್ಲವ ಸಮುದಾಯವನ್ನು ಕೇವಲ ಪೋಸ್ಟರ್ ಅಂಟಿಸುವುದಕ್ಕೆ, ಗಲಭೆ, ದ್ವೇಷ ರಾಜಕಾರಣಕ್ಕೆ ಮಾತ್ರ ಬಳಸಿಕೊಳ್ಳುತಿದೆ ಎಂದು ಅವರು ಆರೋಪಿಸಿದರು.

ಪ್ರಧಾನಿ ವಂಶೋದಯ ರಾಜಕಾರಣ ಎಂಬುದಾಗಿ ಮಾಡಿದ ಟೀಕೆಯು ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಬಿಜೆಪಿಯಲ್ಲಿಯೂ ಒಂದೇ ಕುಟುಂಬದವರು ಟಿಕೆಟ್ ಪಡೆದಿರುವ ಉದಾಹರಣೆಗಳಿವೆ. ಕರ್ನಾಟಕದಲ್ಲಿ ಕೊಹಿನೂರು ವಜ್ರದಂತೆ ಇರುವ ಮಾಜಿ ಪ್ರಧಾನಿ ದೇವೇಗೌಡ ಅವರ ವರ್ಚಸ್ಸು ಪ್ರಧಾನಿ ಅವರ ಕಣ್ಣು ಕುಕ್ಕುತ್ತದೆ. ಆ ಕಾರಣದಿಂದಲೇ ಪ್ರಧಾನಿ ಬಿಜೆಪಿಯ ಅಂತ್ಯೋದಯ ಎಂದು ಹೇಳುವ ಮೂಲಕ ಬಿಜೆಪಿಯ ಅಂತ್ಯ ಎಂಬುದಾಗಿ ಹೇಳಿಕೊಂಡಿದ್ದಾರೆ ಎಂದರು.

ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಸ್ಥಳೀಯ ಬಿಜೆಪಿ ಅಭ್ಯರ್ಥಿಗಳ ಹೆಸರನ್ನೇ ಉಲ್ಲೇಖಿಸಲಿಲ್ಲ. ಸ್ಥಳೀಯ ಅಭ್ಯರ್ಥಿಗಳು ಕೆಲಸಗಾರರಲ್ಲ ಎಂಬುದು ಪ್ರಧಾನಿ ಅವರಿಗೂ ಗೊತ್ತಿದೆ. ಆದ್ದರಿಂದ ರಾಷ್ಟ್ರ ರಾಜಕಾರಣದ ಬಗ್ಗೆ ಮಾತ್ರವೇ ಮಾತನಾಡಿದ್ದಾರೆ. ಇವೆಲ್ಲವನ್ನು ಜಿಲ್ಲೆಯ ಜನತೆ ಗಮನಿಸಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಒಮ್ಮತದ ಅಭ್ಯರ್ಥಿ ಮಿಥುನ್ ರೈ ಅವರಿಗೆ ಮತ ಹಾಕಬೇಕು ಎಂದು ಜೆಡಿ ಎಸ್ ವಕಾತಿರ ಸುಶೀಲ್ ನೊರೊನ್ಹ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಮ್ ಗಣೇಶ್, ಗೋಪಾಲ ಕೃಷ್ಣ ಅತ್ತಾವರ, ಪುಷ್ಪರಾಜ್, ಮಧುಸೂನ್, ಪುಷ್ಪರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News