ಮೂಲಭೂತ ಸೌಲಭ್ಯಗಳಿಲ್ಲದ ಈ ಗ್ರಾಮದ ಜನರ ತಲೆನೋವು ‘ರಫೇಲ್’!
ಹೊಸದಿಲ್ಲಿ, ಎ.15: ರಫೇಲ್ ಯುದ್ಧ ವಿಮಾನ ಖರೀದಿ ವಿವಾದ ಎಲ್ಲರಿಗೂ ಗೊತ್ತೇ ಇದೆ. ಆದರೆ ‘ರಫೇಲ್’ ಎಂಬ ಹೆಸರಿನ ಗ್ರಾಮವೊಂದು ಛತ್ತೀಸ್ ಗಢ ರಾಜ್ಯದಲ್ಲಿದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೇ ಕಾರಣಕ್ಕೆ ಗ್ರಾಮ ಸಾಕಷ್ಟು ಬಾರಿ ಅಪಹಾಸ್ಯಕ್ಕೀಡಾಗಿದೆ. ಈ ಗ್ರಾಮದ ಜನತೆ ಇದೀಗ ತಮ್ಮ ಗ್ರಾಮದ ಹೆಸರು ಬದಲಾವಣೆ ಬಯಸುತ್ತಿದ್ದಾರೆ.
“ಇತರ ಗ್ರಾಮಗಳ ಜನರು ನಮ್ಮನ್ನು ನೋಡಿ ತಮಾಷೆ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತನಿಖೆ ನಡೆಯುವುದು ಎಂದು ಹೇಳುತ್ತಿದ್ದಾರೆ. ಗ್ರಾಮದ ಹೆಸರು ಬದಲಾಯಿಸಿ ಎಂದು ಕೋರಿ ನಾವು ಮುಖ್ಯಮಂತ್ರಿಯನ್ನು ಭೇಟಿಯಾಗಲು ಹೋದರೂ ಅವರ ಭೇಟಿ ಸಾಧ್ಯವಾಗಿಲ್ಲ'' ಎಂದು ಗ್ರಾಮದ ಅತ್ಯಂತ ಹಿರಿಯ ನಿವಾಸಿಯಾಗಿರುವ 83 ವರ್ಷದ ಧರಂ ಸಿಂಗ್ ಹೇಳಿದ್ದಾರೆ.
“ಗ್ರಾಮ ಹಲವು ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯದ ಕೊರತೆ ಅನುಭವಿಸುತ್ತಿದೆ. ನೀರಾವರಿ ಸೌಲಭ್ಯಗಳೂ ಇಲ್ಲದೇ ಇರುವುದರಿಂದ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಇಲ್ಲಿಂದ ಯಾರೇ ಆಯ್ಕೆಯಾದರೂ ನಮ್ಮ ಗ್ರಾಮದ ಹೆಸರು ಬದಲಾಯಿಸಬೇಕೆಂಬುದೇ ನಮ್ಮ ಮನವಿ” ಎಂದು ಅವರು ಹೇಳಿದರು.
ತಮ್ಮ ಗ್ರಾಮಕ್ಕೆ ರಫೇಲ್ ಎಂಬ ಹೆಸರನ್ನು ಏಕೆ ಇಡಲಾಗಿದೆ ಎಂಬುದು ಅವರಿಗೆ ತಿಳಿದಿಲ್ಲ. ಆದರೆ ದಶಕಗಳಿಂದ ಗ್ರಾಮ ಇದೇ ಹೆಸರನ್ನು ಹೊಂದಿದೆ. ಅದರ ಅರ್ಥವೂ ತಿಳಿದಿಲ್ಲ'' ಎಂದು ಅವರು ತಿಳಿಸುತ್ತಾರೆ.