ರೈಲು ಟಿಕೆಟ್ ನಲ್ಲಿ ಪ್ರಧಾನಿಯ ಚಿತ್ರ: ದೂರು ನೀಡಿದ ವ್ಯಕ್ತಿಗೆ ನಿಂದಿಸಿದ ಅಧಿಕಾರಿ

Update: 2019-04-15 15:19 GMT

ಬಾರಾಬಂಕಿ, ಎ.15: ರೈಲ್ವೆ ಟಿಕೆಟ್ ನಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನಾ (ಗ್ರಾಮೀಣ) ವಿವರಗಳು ಪ್ರಧಾನಿ ಮೋದಿಯ ಚಿತ್ರದ ಜತೆ ಮುದ್ರಿತವಾಗಿರುವುದರ ಬಗ್ಗೆ ದೂರಿದ ವ್ಯಕ್ತಿಯೊಬ್ಬರನ್ನು ರೈಲ್ವೆ ಮೇಲ್ವಿಚಾರಕರೇ ನಿಂದಿಸಿ ಕಳುಹಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿ ನಿಲ್ದಾಣದಲ್ಲಿ ವಾರಣಾಸಿಗೆ ತೆರಳಲೆಂದು ಗಂಗಾ ಸಟ್ಲೆಜ್ ಎಕ್ಸ್‍ ಪ್ರೆಸ್ ರೈಲಿನಲ್ಲಿ ಟಿಕೆಟ್ ಮುಂಗಡ ಟಿಕೆಟ್ ಕಾಯ್ದಿರಿಸಿದ ಮುಹಮ್ಮದ್ ಶಬ್ಬಾರ್ ರಿಝ್ವಿ ಎಂಬ ವ್ಯಕ್ತಿಗೆ ನೀಡಲಾದ ಟಿಕೆಟ್ ನಲ್ಲಿ ಈ ಜಾಹೀರಾತು ಕಂಡುಬಂದಿತ್ತು. ಚುನಾವಣಾ ಸಮಯದಲ್ಲಿ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ತಿಳಿದಿರುವ ರಿಝ್ವಿ ಕೂಡಲೇ ಅಲ್ಲಿನ ಮೇಲ್ವಿಚಾರಕರ ಬಳಿ ದೂರಿದ್ದರು. ಆದರೆ ಮೇಲ್ವಿಚಾರಕ ತನ್ನನ್ನು ನಿಂದಿಸಿದ್ದಾರೆ ಎಂದು ರಿಝ್ವಿ ಆರೋಪಿಸಿದ್ದಾರೆ.

ನಂತರ ಅವರು ಮಾಧ್ಯಮಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮಂತೆ ಟಿಕೆಟ್ ಪಡೆದ ಹಲವರು ಕೂಡ ಪ್ರತಿಭಟಿಸಿದ್ದರೆಂದು ರಿಝ್ವಿ ಹೇಳಿದ್ದಾರೆ. ಈ ಬಗ್ಗೆ ನಿಲ್ದಾಣದ ಮೇಲ್ವಿಚಾರಕರನ್ನು ಪ್ರಶ್ನಿಸಿದಾಗ ಪ್ರಧಾನಿ ಚಿತ್ರವಿರುವ ಪೇಪರ್ ರೋಲ್ ಪ್ರಮಾದವಶಾತ್ ಪ್ರಿಂಟಿಂಗ್ ಮಶೀನಿನೊಳಗೆ  ಹಾಕಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರಧಾನಿ ಮೋದಿಯ ಚಿತ್ರಗಳು ರೈಲು ಟಿಕೆಟ್ ಗಳಲ್ಲಿ ಸರಕಾರಿ ಯೋಜನೆಯ ಮಾಹಿತಿಯೊಂದಿಗೆ  ಕಾಣಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ನಿಯೋಗವೊಂದು ಈ ಹಿಂದೆ ಚುನಾವಣಾ ಆಯೋಗಕ್ಕೆ ದೂರು ನೀಡಿದ ನಂತರ ಇಂತಹ ಟಿಕೆಟ್ ಗಳನ್ನು ವಾಪಸ್ ಪಡೆಯುವುದಾಗಿ ರೈಲ್ವೆ ಇಲಾಖೆ ತಿಳಿಸಿತ್ತು. 

ಆದರೂ ಪ್ರಧಾನಿ ಚಿತ್ರಗಳಿರುವ ರೈಲು ಟಿಕೆಟ್ ಗಳು ಈಗಲೂ ಮಾರಾಟವಾಗುತ್ತಿವೆ ಎಂಬುದಕ್ಕೆ ಈ ಉದಾಹರಣೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News