ಪೊಲೀಸ್ ರಕ್ಷಣೆ ಕೇಳಿದ ಉರ್ಮಿಳಾ ಮಾತೋಂಡ್ಕರ್

Update: 2019-04-15 16:02 GMT

ಮುಂಬೈ,ಎ.15: ಉತ್ತರ ಮುಂಬೈಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ನಡೆದ ಹೊಡೆದಾಟದ ಹಿನ್ನೆಲೆಯಲ್ಲಿ ತನಗೆ ರಕ್ಷಣೆ ನೀಡುವಂತೆ ನಟಿ-ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸರ ಪ್ರಕಾರ, ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಉರ್ಮಿಳಾ ಮಾತೋಂಡ್ಕರ್ ಬೋರಿವಿಲಿ ಬಳಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು, ಮೋದಿಪರ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಎರಡೂ ಪಕ್ಷಗಳ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದು ಹೊಡೆದಾಟದ ಹಂತ ತಲುಪಿತು.

ಘಟನೆಯಿಂದ ಆಘಾತಕ್ಕೊಳಗಾದ ಮಾತೋಂಡ್ಕರ್, ಇದು ಆಡಳಿತಪಕ್ಷದ ಬೆಂಬಲಿಗರಿಂದ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಬಿಜೆಪಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

“ಇದು ಕೇವಲ ಆರಂಭ ಮತ್ತು ಇದು ಹಿಂಸಾತ್ಮಕ ರೂಪವನ್ನೂ ತಾಳಬಹುದು. ನನ್ನ ಪ್ರಾಣಕ್ಕೆ ಅಪಾಯವಿರುವ ಕಾರಣ ನಾನು ಪೊಲೀಸ್ ರಕ್ಷಣೆ ಕೋರಿದ್ದೇನೆ. ಜೊತೆಗೆ ಬಿಜೆಪಿ ಬೆಂಬಲಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ” ಎಂದು ಮಾತೋಂಡ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News