79 ಭ್ರಷ್ಟ ಉದ್ಯೋಗಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಅನುಮತಿಗೆ ಕಾಯುತ್ತಿರುವ ಸಿವಿಸಿ

Update: 2019-04-15 17:03 GMT

ಹೊಸದಿಲ್ಲಿ, ಎ.15: ಓರ್ವ ಐಎಎಸ್ ಅಧಿಕಾರಿ ಸೇರಿದಂತೆ 79 ಭ್ರಷ್ಟ ಕೇಂದ್ರ ಸರಕಾರಿ ಉದ್ಯೋಗಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ವಿವಿಧ ಸಂಸ್ಥೆಗಳಿಂದ ಅನುಮತಿಗಾಗಿ ಕೇಂದ್ರ ಜಾಗ್ರತ ಆಯೋಗ(ಸಿವಿಸಿ)ವು ಕಳೆದ ನಾಲ್ಕು ತಿಂಗಳುಗಳಿಗೂ ಹೆಚ್ಚು ಸಮಯದಿಂದ ಕಾಯುತ್ತಿದೆ.

ಈ ಅಧಿಕಾರಿಗಳು ಭಾಗಿಯಾಗಿರುವ ಒಟ್ಟು 41 ಪ್ರಕರಣಗಳು ಕಾನೂನು ಕ್ರಮಕ್ಕಾಗಿ ಸರಕಾರಿ ಇಲಾಖೆಗಳ ಅನುಮತಿಗಾಗಿ ಬಾಕಿಯಾಗಿವೆ ಎಂದು ಸಿವಿಸಿಯ ಇತ್ತೀಚಿನ ಮಾಹಿತಿಯು ತಿಳಿಸಿದೆ.

ಈ ಪೈಕಿ ಅತಿ ಹೆಚ್ಚು,ಅಂದರೆ ಒಂಭತ್ತು ಪ್ರಕರಣಗಳು ಭ್ರಷ್ಟಾಚಾರ ನಿಗ್ರಹ ವಿಷಯಗಳಲ್ಲಿ ನೋಡಲ್ ಇಲಾಖೆಯಾಗಿ ಕಾರ್ಯಾಚರಿಸುತ್ತಿರುವ ಸಿಬ್ಬಂದಿ ಸಚಿವಾಲಯದ ಬಳಿ ಮತ್ತು ಎಂಟು ಪ್ರಕರಣಗಳು ಉತ್ತರ ಪ್ರದೇಶ ಸರಕಾರದ ಬಳಿ ಬಾಕಿಯಾಗಿವೆ.

13 ಸಿಬ್ಬಂದಿಗಳು ಭಾಗಿಯಾಗಿರುವ ಒಟ್ಟು ನಾಲ್ಕು ಪ್ರಕರಣಗಳು ಎಸ್‌ಬಿಐ,ಕೆನರಾ ಬ್ಯಾಂಕ್,ಕಾರ್ಪೊರೇಷನ್ ಬ್ಯಾಂಕ್ ಮತ್ತು ಐಡಿಬಿಐ ಬಳಿ ಬಾಕಿಯುಳಿದಿವೆ.

ಇತರ ಇಲಾಖೆಗಳ ಪೈಕಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರು,ರಕ್ಷಣಾ,ಆಹಾರ ಮತ್ತು ಪೂರೈಕೆ,ಆರೋಗ್ಯ ಮ ತ್ತು ಕುಟುಂಬ ಕಲ್ಯಾಣ ಹಾಗೂ ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವಾಲಯಗಳಲ್ಲಿ ತಲಾ ಒಂದು ಪ್ರಕರಣಗಳು ಬಾಕಿಯುಳಿದುಕೊಂಡಿವೆ.

ನಿಯಮಗಳನುಸಾರ ಕಾನೂನು ಕ್ರಮಕ್ಕಾಗಿ ಅನುಮತಿಯನ್ನು ನಾಲ್ಕು ತಿಂಗಳೊಳಗೆ ಮಂಜೂರು ಮಾಡಬೇಕಿದೆ.

ಅನುಮತಿಯನ್ನು ಕೋರಿ ಸಲ್ಲಿಸಿರುವ ಮನವಿಗಳ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ನಾವು ಸರಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳಿಗೆ ನೆನಪಿಸಿದ್ದೇವೆ ಎಂದು ಹಿರಿಯ ಸಿವಿಸಿ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News