ಬಹಿರಂಗವಾಗಿ ವಾಗ್ಯುದ್ಧವಾಡಿದ್ದ ಶಾಸಕರಿಬ್ಬರಿಗೆ ಬಿಜೆಪಿ ನೋಟಿಸ್

Update: 2019-04-15 17:10 GMT

ಡೆಹ್ರಾಡೂನ್, ಎ.15: ಬಹಿರಂಗವಾಗಿ ವಾಗ್ಯುದ್ಧದಲ್ಲಿ ತೊಡಗಿದ್ದಕ್ಕಾಗಿ ಪಕ್ಷದ ಇಬ್ಬರು ಶಾಸಕರಿಗೆ ಉತ್ತರಾಖಂಡದ ಆಡಳಿತ ಬಿಜೆಪಿಯು ಸೋಮವಾರ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

ಇದೊಂದು ಗಂಭೀರ ವಿಷಯವಾಗಿದೆ. ತಮ್ಮ ವರ್ತನೆಯ ಬಗ್ಗೆ ವಿವರಿಸುವಂತೆ ಸೂಚಿಸಿ ಇಬ್ಬರು ಶಾಸಕರಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಜಯ ಭಟ್ಟ ತಿಳಿಸಿದರು.

ಬಿಜೆಪಿ ಶಾಸಕರಾದ ಕುಂವರ್ ಪ್ರಣವ್ ಸಿಂಗ್ ಚಾಂಪಿಯನ್(ಖಾನ್‌ಪುರ) ಮತ್ತು ದೇಸರಾಜ್ ಕರ್ನಾವಾಲ್(ಝಬ್ರೇದಾ) ಅವರು ಇತ್ತೀಚಿಗೆ ವಾಗ್ಯುದ್ಧದಲ್ಲಿ ತೊಡಗಿಕೊಂಡಿದ್ದರು. ಕರ್ನಾವಾಲ್ ಅವರು ಚಾಂಪಿಯನ್‌ರ ಶೈಕ್ಷಣಿಕ ಮತ್ತು ಕ್ರೀಡಾ ದಾಖಲೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಇದಕ್ಕೆ ಕಾರಣವಾಗಿತ್ತು.

ತನ್ನ ದಾಖಲೆಗಳನ್ನು 'ಸುಳ್ಳು' ಎಂದು ಕರ್ನಾವಾಲ್ ಬಣ್ಣಿಸಿದ್ದು ಗೊತ್ತಾದ ಬಳಿಕ ಕುಸ್ತಿಪಟುವೆಂದು ಹೇಳಿಕೊಂಡಿರುವ ಚಾಂಪಿಯನ್ ರೂರ್ಕಿಯ ಸ್ಟೇಡಿಯಂ ಒಂದರಲ್ಲಿ ತನ್ನೊಂದಿಗೆ ಕುಸ್ತಿಪಂದ್ಯವನ್ನು ಆಡುವಂತೆ ಅವರಿಗೆ ಸವಾಲನ್ನೊಡ್ಡಿದ್ದರು. ನಿಗದಿತ ದಿನದಂದು ಚಾಂಪಿಯನ್ ಸ್ಟೇಡಿಯಮ್‌ಗೆ ಬಂದಿದ್ದರಾದರೂ ಕರ್ನಾವಾಲ್ ಗೈರುಹಾಜರಾಗಿದ್ದರು.

ಕರ್ನಾವಾಲ್‌ಗೆ ಒಂದು ತಪರಾಕಿಯನ್ನೂ ಸಹಿಸುವ ಶಕ್ತಿಯಿಲ್ಲ,ಹೀಗಾಗಿ ಅವರು ತನ್ನೊಂದಿಗೆ ಕುಸ್ತಿಗೆ ಬಂದಿಲ್ಲ ಎಂದು ಚಾಂಪಿಯನ್ ಟೀಕಿಸಿದ್ದರು.

ಅತ್ತ ಕುಸ್ತಿಪಂದ್ಯಕ್ಕೆ ತನ್ನ ಗೈರುಹಾಜರಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಕರ್ನಾವಾಲ್,ಚಾಂಪಿಯನ್‌ಗೆ ತಲೆ ಕೆಟ್ಟಿದೆ. ಅವರನ್ನು ಹುಚ್ಚಾಸ್ಪತೆಗೆ ಸೇರಿಸಬೇಕು. ಇದು ಶಸ್ತ್ರಾಸ್ತ್ರಗಳ ಯುಗವಾಗಿದೆ,ಕುಸ್ತಿಯದ್ದಲ್ಲ ಎಂದು ತಿರುಗೇಟು ನೀಡಿದ್ದರು.

ಇಬ್ಬರು ಶಾಸಕರು ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದು ಸಾಬೀತಾದರೆ ಅವರ ವಿರುದ್ಧ ಸೂಕ್ತಕ್ರಮವನ್ನು ತೆಗೆದುಕೊಳ್ಳುವುದಾಗಿ ಭಟ್ಟ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News