ನಾಗರಿಕತ್ವ ತಿದ್ದುಪಡಿ ಮಸೂದೆ ವಾಪಸ್ ಜಾರಿ: ಬಿಜೆಪಿ

Update: 2019-04-15 17:12 GMT

ಇಂಪಾಲ, ಎ.15: ಅಕ್ರಮ ವಲಸಿಗರ ಸಮಸ್ಯೆಯಿಂದ ದೇಶೀಯ ಜನರ ಹಿತಾಸಕ್ತಿಯನ್ನು ರಕ್ಷಿಸಲು ಬಿಜೆಪಿ ಬದ್ಧವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ನಾಗರಿಕತ್ವ ತಿದ್ದುಪಡಿ ಮಸೂದೆಯನ್ನು ವಾಪಸ್ ಜಾರಿಗೆ ತರಲಿದೆ ಎಂದು ಮಣಿಪುರದ ಲೋಕಸಭಾ ಅಭ್ಯರ್ಥಿ ಆರ್.ಕೆ ರಂಜನ್ ತಿಳಿಸಿದ್ದಾರೆ.

ಮಣಿಪುರದಲ್ಲಿ ಅಕ್ರಮ ವಲಸಿಗರ ಸಮಸ್ಯೆ ಅತಿಯಾಗಿದೆ. ನಾಗರಿಕತ್ವ ತಿದ್ದುಪಡಿ ಮಸೂದೆಯ ವಿರುದ್ಧ ಹಿಂಸಾತ್ಮಾಕ ಪ್ರತಿಭಟನೆಗಳು ನಡೆದ ನಂತರ ಮಣಿಪುರದಲ್ಲಿ ಪ್ರಸ್ತಾವಿತ ಕಾಯ್ದೆಯನ್ನು ಕೈಬಿಡಲಾಗಿತ್ತು.

ಕಳೆದ ಫೆಬ್ರವರಿಯಲ್ಲಿ ಮಸೂದೆಯ ವಿರುದ್ಧ ರಾಜ್ಯದಲ್ಲಿ ನಡೆದ ಪ್ರತಿಭಟನೆಗಳು ಮಾಹಿತಿಯ ಕೊರತೆಯಿಂದ ನಡೆದಿವೆ. ಹಾಗಾಗಿ ಪರಿಷ್ಕೃತ ಮಸೂದೆಯ ಮೂಲಕ ಭಾರತಕ್ಕೆ ನುಸುಳುವ ಅಕ್ರಮ ವಲಸಿಗರ ಸಮಸ್ಯೆಗೆ ಕಡಿವಾಣ ಹಾಕಲಾಗುವುದು. ಜೊತೆಗೆ ರಾಷ್ಟ್ರಾದ್ಯಂತ ನಾಗರಿಕರ ರಾಷ್ಟ್ರೀಯ ನೋಂದಣಿ ಜಾರಿಗೆ ತರಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

ವಲಸಿಗರು ಆಶ್ರಯ ಪಡೆಯುತ್ತಿರುವ ರಾಜ್ಯಗಳ ನೆರವಿನ ಹೊರತಾಗಿ ಈ ಮಸೂದೆಯನ್ನು ಜಾರಿಗೆ ತರುವುದು ಅಸಾಧ್ಯ. ಆದರೆ ಕಾಂಗ್ರೆಸ್ ಹರಡುತ್ತಿರುವ ತಪ್ಪು ಮಾಹಿತಿಗಳ ಕಾರಣ ಈ ರಾಜ್ಯಗಳಲ್ಲಿ ಜನರು ಮಸೂದೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.

ಈ ಮಸೂದೆಯನ್ನು 2016ರಲ್ಲಿ ಸಂಸತ್ ಸ್ಥಾಯಿ ಸಮಿತಿಯ ಅನುಮತಿಯೊಂದಿಗೆ ಸಂಸತ್‌ನಲ್ಲಿ ಪರಿಚಯಿಸಲಾಗಿತ್ತು. ಆ ಸಮಯದಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಆಗ ಈ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸದವರು ಈಗ ಚುನಾವಣೆಯ ಸಮಯದಲ್ಲಿ ಯಾಕೆ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

ಅಸ್ಸಾಂನಲ್ಲಿ ಬಿಜೆಪಿ ನಾಗರಿಕತ್ವದ ರಾಷ್ಟ್ರೀಯ ನೋಂದಣಿಯನ್ನು ಹಂತಹಂತವಾಗಿ ಜಾರಿಗೆ ತಂದಿದೆ. ಇದೇ ಮಾದರಿಯಲ್ಲಿ ದೇಶಾದ್ಯಂತ ಈ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News