ಸಿರಿಯದಲ್ಲಿ ಅಪಹರಣಕ್ಕೊಳಗಾದ ನ್ಯೂಝಿಲ್ಯಾಂಡ್ ನರ್ಸ್ ಜೀವಂತ: ರೆಡ್‌ಕ್ರಾಸ್ ವಿಶ್ವಾಸ

Update: 2019-04-15 17:18 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಎ. 15: ಸಿರಿಯದಲ್ಲಿ 2013ರಲ್ಲಿ ಐಸಿಸ್ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿರುವ ನ್ಯೂಝಿಲ್ಯಾಂಡ್‌ನ ನರ್ಸ್ ಈಗಲೂ ಬದುಕಿರಬಹುದು ಎಂಬುದಾಗಿ ನಂಬಲಾಗಿದೆ ಎಂದು ಅಂತರ್‌ರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್‌ಸಿ) ಹೇಳಿದೆ.

ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇದ್ದರೆ ತಿಳಿಸುವಂತೆ ಕೋರುವ ಮನವಿಯೊಂದನ್ನು ಅದು ಬಿಡುಗಡೆಗೊಳಿಸಿದೆ.

ಸಿರಿಯದ ವಾಯುವ್ಯ ಭಾಗದ ಇದ್ಲಿಬ್ ರಾಜ್ಯದಲ್ಲಿ ಸಂತ್ರಸ್ತ ಜನರಿಗೆ ಅವಶ್ಯಕ ವಸ್ತುಗಳನ್ನು ಪೂರೈಸುವ ರೆಡ್‌ಕ್ರಾಸ್ ವಾಹನಗಳ ಸಾಲಿನಲ್ಲಿ ಹೋಗುತ್ತಿದ್ದಾಗ, ಲೂಸಿಯಾ ಅಕಾವಿಯನ್ನು ಸಿರಿಯ ಇಬ್ಬರು ವಾಹನ ಚಾಲಕರ ಸಮೇತ ಅಪಹರಿಸಲಾಗಿತ್ತು.

ರೆಡ್‌ಕ್ರಾಸ್‌ನ ವಾಹನಗಳ ಸಾಲನ್ನು 2013 ಅಕ್ಟೋಬರ್ 13ರಂದು ಬಂದೂಕುಧಾರಿಗಳು ನಿಲ್ಲಿಸಿ ಏಳು ಮಂದಿಯನ್ನು ಅಪಹರಿಸಿದ್ದರು. ಅವರ ಪೈಕಿ ನಾಲ್ವರನ್ನು ಉಗ್ರರು ಮಾರನೇ ದಿನ ಬಿಡುಗಡೆಗೊಳಿಸಿದ್ದರು.

''2018ರ ಕೊನೆಯಲ್ಲಿ ಲೂಸಿಯ ಬದುಕಿರುವುದು ವಿಶ್ವಾಸಾರ್ಹ ಮಾಹಿತಿಯೊಂದರಿಂದ ಗೊತ್ತಾಗಿದೆ'' ಎಂದು ರವಿವಾರ ಜಿನೇವದಿಂದ ಹೊರಡಿಸಲಾದ ಹೇಳಿಕೆಯೊಂದರಲ್ಲಿ ಐಸಿಆರ್‌ಸಿ ತಿಳಿಸಿದೆ.

''ಲೂಸಿಯ ಜೊತೆಗೆ ಅಪಹರಿಸಲ್ಪಟ್ಟಿರುವ ಸಿರಿಯದ ಚಾಲಕರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಐಸಿಆರ್‌ಸಿಗೆ ಸಾಧ್ಯವಾಗಿಲ್ಲ ಹಾಗೂ ಅವರಿಗೆ ಏನಾಗಿದೆ ಎನ್ನುವುದು ಗೊತ್ತಾಗಿಲ್ಲ'' ಎಂದು ರೆಡ್‌ಕ್ರಾಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News