ಲಂಡನ್‌ನಲ್ಲಿ 'ಬೇಹುಗಾರಿಕಾ ಕೇಂದ್ರ' ಸ್ಥಾಪನೆಗೆ ಅಸಾಂಜ್ ಯತ್ನಿಸಿದ್ದರು

Update: 2019-04-15 17:54 GMT
ಜೂಲಿಯನ್ ಅಸಾಂಜ್‌

ಲಂಡನ್, ಎ. 15: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ನೀಡಿರುವ ಆಶ್ರಯವನ್ನು ರದ್ದುಪಡಿಸಲು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಇಕ್ವೆಡಾರ್ ಅಧ್ಯಕ್ಷ ಲೆನಿನ್ ಮೊರೆನೊ ರವಿವಾರ ಸಮರ್ಥಿಸಿಕೊಂಡಿದ್ದಾರೆ.

ವಿಕಿಲೀಕ್ಸ್ ಸ್ಥಾಪಕರು ಇಕ್ವೆಡಾರ್‌ನ ಲಂಡನ್ ರಾಯಭಾರ ಕಚೇರಿಯಲ್ಲಿ 'ಬೇಹುಗಾರಿಕಾ ಕೇಂದ್ರ'ವೊಂದನ್ನು ಸ್ಥಾಪಿಸಲು ಯತ್ನಿಸಿದ್ದರು ಎಂದು 'ಗಾರ್ಡಿಯನ್' ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

''ನಮ್ಮ ನೆಲದಿಂದ ಹಾಗೂ ಹಿಂದಿನ ಸರಕಾರದ ಅಧಿಕಾರಿಗಳ ಒಪ್ಪಿಗೆಯಿಂದ, ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಇತರ ದೇಶಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಸೌಲಭ್ಯಗಳನ್ನು ಒದಗಿಸಲಾಗಿರುವುದು ದುರದೃಷ್ಟಕರ'' ಎಂದು ಮೊರೇನೊ ನುಡಿದರು.

''ನಮ್ಮ ಮನೆ, ನಾವು ಆಶ್ರಯ ನೀಡಿದ ಮನೆ ಬೇಹುಗಾರಿಕಾ ಕೇಂದ್ರವಾಗಲು ನಾವು ಅವಕಾಶ ನೀಡುವಂತಿಲ್ಲ'' ಎಂದು ಅವರು ಹೇಳಿದರು.

ಮೊರೇನೊ 2017ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ.

''ನಮ್ಮ ನಿರ್ಧಾರ ನಿರಂಕುಶವಲ್ಲ, ಅಂತರ್‌ರಾಷ್ಟ್ರೀಯ ಕಾನೂನಿನಡಿ ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ'' ಎಂದರು.

ಇಕ್ವೆಡಾರ್ ಆಶ್ರಯ ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಲಂಡನ್ ಪೊಲೀಸರು ಅಸಾಂಜ್‌ರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪವಿದೆ. ಅದರ ವಿಚಾರಣೆ ಈಗ ನಡೆಯುತ್ತಿದೆ.

ಸ್ವೀಡನ್‌ನಲ್ಲಿ ಅವರು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದು, ಅಲ್ಲಿಗೆ ಗಡಿಪಾರುಗೊಳ್ಳುವುದನ್ನು ತಪ್ಪಿಸಲು ಅವರು ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು.

ಒಳಗೆ ಬಾಕ್ಸ್

ಟ್ರಂಪ್‌ಗೆ ಮುಂಚಿತ ಮಾಹಿತಿ ಇರಲಿಲ್ಲ: ಸಲಹೆಗಾರ

ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಬ್ರಿಟನ್ ಪೊಲೀಸರು ಬಂಧಿಸುತ್ತಾರೆ ಎಂಬ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮುಂಚಿತ ಮಾಹಿತಿ ಇತ್ತು ಎಂದು ನಾನು ಭಾವಿಸುವುದಿಲ್ಲ ಎಂದು ಶ್ವೇತಭವನದ ಸಲಹೆಗಾರ್ತಿ ಕೆಲ್ಯಾನ್ ಕಾನ್ವೇ ರವಿವಾರ ಹೇಳಿದ್ದಾರೆ.

ಇತ್ತೀಚೆಗೆ ಅಸಾಂಜ್ ಬಂಧನ ನಡೆದ ಬೆನ್ನಿಗೇ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಅವರ ವಿರುದ್ಧ ರಹಸ್ಯ ಮಾಹಿತಿ ಸೋರಿಕೆ ಆರೋಪವನ್ನು ಹೊರಿಸಿರುವುದನ್ನು ಸ್ಮರಿಸಬಹುದಾಗಿದೆ.

''ಈ ಬಗ್ಗೆ ಟ್ರಂಪ್‌ಗೆ ಮಾಹಿತಿಯಿರುವುದು ನನ್ನ ಗಮನಕ್ಕೆ ಬಂದಿಲ್ಲ'' ಎಂದು ಎನ್‌ಬಿಸಿ ಸುದ್ದಿವಾಹಿನಿಯ 'ಮಿಟ್ ದ ಪ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಕಾನ್ವೇ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News