ಮೋದಿಯನ್ನು ಮನೆಗೆ ಕಳುಹಿಸುವವರೆಗೆ ನಿದ್ದೆ ಬಾರದು: ಕೆಪಿಸಿಸಿ ಕಾರ್ಮಿಕ ಘಟಕ
ಮಂಗಳೂರು, ಎ.15: ಸುಳ್ಳನ್ನೇ ಬಂಡವಾಳ ಮಾಡಿಕೊಂಡ, ಕಾರ್ಮಿಕರನ್ನು ಶೋಷಿಸುವ ಪ್ರಧಾನಿ ನರೇಂದ್ರ ಮೋದಿಯನ್ನು ಮನೆಗೆ ಕಳುಹಿಸುವವರೆಗೆ ನಮಗೆ ನಿದ್ದೆ ಬಾರದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪ್ರಕಾಶಂ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೊಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ.62ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಕೆಲಸದ ಭದ್ರತೆಯೇ ಇಲ್ಲ. ಲಾಭದಲ್ಲಿದ್ದ ವಿಜಯಾ ಬ್ಯಾಂಕನ್ನು ಬರೋಡಾ ಬ್ಯಾಂಕ್‌ಗೆ ವಿಲೀನ ಮಾಡಿದ ಅಪಕೀರ್ತಿ ಬಿಜೆಪಿಗೆ ಸಲ್ಲಲಿದೆ. ಪ್ರಣಾಳಿಕೆಯಲ್ಲಿ ಕಾರ್ಮಿಕರ ಪರ ಯಾವುದೇ ಆಶ್ವಾಸನೆ ನೀಡಿಲ್ಲ. ಅಲ್ಲದೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಮೋದಿಯನ್ನು ಮನೆೆ ಕಳುಹಿಸಲೇಬೇಕಿದೆ ಎಂದರು.
ನಳಿನ್ ಯಾವುದೇ ಅಭಿವೃದ್ಧಿ ಪರ ಕೆಲಸ ಮಾಡಿಲ್ಲ. ಅವಕಾಶವನ್ನು ಕೈ ಚೆಲ್ಲಿದ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಬದಲು ಮಿಥುನ್ ರೈಯನ್ನು ಗೆಲ್ಲಿಸಬೇಕಿದೆ ಎಂದು ಡಾ.ಎಸ್.ಎಸ್.ಪ್ರಕಾಶಂ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು, ಅಮೀರ್ ಅಹ್ಮದ್ ತುಂಬೆ, ಅಬ್ಬಾಸ್ ಅಲಿ, ಇಬ್ರಾಹೀಂ ಕೋಡಿಜಾಲ್, ಮೋಹನ್ ಮೆಂಡನ್, ಜ್ಞಾನೇಶ್, ಪಳನಿಸ್ವಾಮಿ, ಹಯಾತುಲ್ ಕ್ವಾಮಿಲ್, ವಹಾಬ್ ಕುದ್ರೋಳಿ, ಎಡ್ವರ್ಡ್ ವಾಸ್ ಉಪಸ್ಥಿತರಿದ್ದರು.