×
Ad

ಪ್ರಜಾಪ್ರಭುತ್ವ ಬಲಪಡಿಸಲು ಕರ್ತವ್ಯ ನಿರ್ವಹಿಸಿ: ಡಿಸಿ ಸಸಿಕಾಂತ್ ಸೆಂಥಿಲ್

Update: 2019-04-15 23:26 IST

ಮಂಗಳೂರು, ಎ.15: ಪ್ರತಿಯೊಬ್ಬರೂ ಆತ್ಮವಿಶ್ವಾಸ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸುವ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿದರು.

ಸೋಮವಾರ ಎಲ್ಲ ಸೆಕ್ಟರ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜಿಲ್ಲಾಧಿಕಾರಿ, ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರತಿಯೊಬ್ಬರೂ ಅವರ ಕರ್ತವ್ಯಗಳನ್ನು ಇನ್ನಷ್ಟು ಶ್ರದ್ಧೆಯಿಂದ ಮಾಡಬೇಕು ಎಂದು ಸೂಚನೆ ನೀಡಿದರು.

ಸೆಕ್ಟರ್ ಅಧಿಕಾರಿಗಳ ಹೊಣೆಯನ್ನು ವಿವರಿಸಿದರು. ಚುನಾವಣಾ ಕೈಪಿಡಿಯನ್ನು ಓದಿಕೊಳ್ಳಬೇಕು. ಅದರಲ್ಲಿ ಪ್ರತಿಯೊಂದು ವಿಷಯವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಮತಗಟ್ಟೆಯಲ್ಲಿ ಮತದಾನ ದಿನದಂದು ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಚೂತಪ್ಪದೇ ಚುನಾವಣಾ ನಿಯಮಗಳನ್ನು ಪಾಲಿಸಬೇಕು. ಇನ್ನೂ ನಿಮ್ಮಲ್ಲಿ ಯಾರಲ್ಲಾದರೂ ಸಂಶಯಗಳಿದ್ದರೆ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳಲ್ಲಿ ಎಲ್ಲ ಸಂದರ್ಭಗಳಲ್ಲೂ ಧೈರ್ಯ ತುಂಬಬೇಕು. ಮತಗಟ್ಟೆ ಅಧಿಕಾರಿಗಳು ತಮ್ಮ ಸಲಕರಣೆಗಳೊಂದಿಗೆ ನಿಮ್ಮ ಸೆಕ್ಟರ್ ವ್ಯಾಪ್ತಿಯ ಮತಗಟ್ಟೆಗಳನ್ನು ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇವಿಎಂ ಸಿದ್ಧತೆ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಕೊನೆಯ ನಿಮಿಷದ ಸಂದೇಹಗಳಿದ್ದರೆ ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಅಣಕು ಮತದಾನ ನಡೆಸಿದ ಬಗ್ಗೆ ಹಾಗೂ ಅದನ್ನು ಕ್ಲಿಯರ್ ಮಾಡಿದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಗಾಬರಿಗೊಳಗಾಗದೆ ಶಾಂತಿಯುತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ಜೊತೆ ಸಮಗ್ರ ಚುನಾವಣಾ ವ್ಯವಸ್ಥೆ ಇದೆ ಎಂಬುದನ್ನು ಮರೆಯಬೇಡಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು

ಎಲ್ಲ ಎಆರ್‌ಒಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News