ಸಾಮಾನ್ಯ ವರ್ಗದ ಬಡವರಿಗೆ ಶೇ.10 ಕೋಟಾಕ್ಕಾಗಿ ವಿವಿಗಳಲ್ಲಿ 2 ಲಕ್ಷಕ್ಕೂ ಅಧಿಕ ಸೀಟ್‌ಗಳ ಸೇರ್ಪಡೆಗೆ ಸಂಪುಟದ ಅಸ್ತು

Update: 2019-04-15 17:56 GMT

ಹೊಸದಿಲ್ಲಿ, ಎ.15: ಆರ್ಥಿಕವಾಗಿ ದುರ್ಬಲ ವರ್ಗಕ್ಕಾಗಿ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು 158 ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಸೀಟ್‌ಗಳನ್ನು ಸೇರ್ಪಡೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟದ ಸಭೆಯು ಸೋಮವಾರ ಹಸಿರು ನಿಶಾನೆಯನ್ನು ತೋರಿಸಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ಈ ಪ್ರಸ್ತಾವವನ್ನು ಸಂಪುಟಕ್ಕೆ ಸಲ್ಲಿಸುವ ಮುನ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಚುನಾವಣಾ ಆಯೋಗದ ಅನುಮತಿಯನ್ನು ಕೋರಿತ್ತು ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.

ಸಂಪುಟದ ಅನುಮತಿಯೊಂದಿಗೆ ಒಟ್ಟು 2,14,766 ಸೀಟ್‌ಗಳು ಸೃಷ್ಟಿಯಾಗಲಿವೆ. ಈ ಪೈಕಿ 1,19,983 ಸೀಟ್‌ಗಳನ್ನು 2019-20ನೇ ಶೈಕ್ಷಣಿಕ ವರ್ಷದಲ್ಲಿ ಮತ್ತು 95,783 ಸೀಟ್‌ಗಳನ್ನು 2020-21ರಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಅವು ಹೇಳಿದವು.

ಸಾಮಾನ್ಯ ವರ್ಗದ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಮೀಸಲಾತಿ ಜಾರಿಗಾಗಿ 158 ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಗೆ 4315.15 ಕೋ.ರೂ.ಗಳನ್ನು ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News