ದೇವರ ಆಕ್ರೋಶದಿಂದ ಮನೋಹರ್ ಪಾರಿಕ್ಕರ್‌ಗೆ ಕ್ಯಾನ್ಸರ್: ಗೋವಾ ಪಾದ್ರಿಯ ವಿವಾದಾತ್ಮಕ ಹೇಳಿಕೆ

Update: 2019-04-15 17:58 GMT

ಹೊಸದಿಲ್ಲಿ,ಎ.15: ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಪಕ್ಷವಾಗಿದೆ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ದೇವರ ಆಕ್ರೋಶದಿಂದಾಗಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ಕೆಥೊಲಿಕ್ ಪಾದ್ರಿಯೊಬ್ಬರು ನೀಡಿದ ವಿವಾದಾತ್ಮಕ ಹೇಳಿಕೆಯ ವಿಡಿಯೊ ವೈರಲ್ ಆಗಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಗೋವಾದ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ.

ಗೋವಾದ ವಾಸ್ಕೋಡಾ ಗಾಮದಲ್ಲಿ ಕಲ್ಲಿದ್ದಲು ಧೂಳಿನ ಮಾಲಿನ್ಯ ಸಮಸ್ಯೆಯ ವಿರುದ್ಧವೂ ಮಾತನಾಡಿರುವ ಫಾದರ್ ಕೊನ್ಸಿಕಾವೊ ಡಿಸಿಲ್ವಾ ಅವರು, ಇಲ್ಲಿ ಕಲ್ಲಿದ್ದಲಿನ ಧೂಳು ಎಲ್ಲೆಂದರಲ್ಲಿ ಹರಡಿದೆ. ಆಹಾರದಲ್ಲಿ, ನೀರಿನಲ್ಲಿ, ಮನೆಗಳಲ್ಲಿ ಎಲ್ಲ ಕಡೆಯೂ ಧೂಳೇ ತುಂಬಿದೆ. ಜನರು ಪ್ರತಿಭಟನೆ ನಡೆಸಿದರೂ, ಸಭೆಗಳನ್ನು ನಡೆಸಿದರೂ ಪಾರಿಕ್ಕರ್ ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅವರ ಜೇಬುಗಳು ತುಂಬಿದ್ದವು. ಹಾಗಾಗಿ ದೇವರು ಅವರಿಗೆ ಕ್ಯಾನ್ಸರ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪಾರಿಕ್ಕರ್ ಶಾಲಾ ರಜೆಗಳನ್ನೂ ರದ್ದು ಮಾಡಲು ಬಯಸಿದ್ದರು. ಹಾಗಾಗಿ ನರಳಿ ಸತ್ತರು. ಮೆದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಭೀಕರ ಕಾಯಿಲೆಯಾಗಿದೆ. ದೇವರ ಹಾದಿಯನ್ನು ಉಲ್ಲಂಘಿಸುವವರು ಶಿಕ್ಷೆಗೊಳಪಡುತ್ತಾರೆ ಎಂದು ಡಿಸಿಲ್ವಾ ತಿಳಿಸಿದ್ದಾರೆ.

ಬಿಜೆಪಿಯನ್ನು ಅಲ್ಪಸಂಖ್ಯಾತ ವಿರೋಧಿ ಪಕ್ಷ ಎಂದು ವ್ಯಾಖ್ಯಾನಿಸಿದ ಪಾದ್ರಿ ಕೇಸರಿ ಪಕ್ಷಕ್ಕೆ ಕ್ರೈಸ್ತರು ಮತ ಹಾಕಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾದ್ರಿಯ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News