ವಿವಾಹದ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ‘ಅತ್ಯಾಚಾರ’: ಸುಪ್ರೀಂ ಕೋರ್ಟ್

Update: 2019-04-15 17:59 GMT

ಹೊಸದಿಲ್ಲಿ,ಎ.15: ಮದುವೆಯಾಗುವ ಸುಳ್ಳು ಭರವಸೆ ನೀಡಿ ನಡೆಸುವ ದೈಹಿಕ ಸಂಬಂಧ ಅತ್ಯಾಚಾರವಾಗಿದೆ ಮತ್ತು ಮಹಿಳೆಯ ಗೌರವಕ್ಕೆ ನೀಡುವ ಧಕ್ಕೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಅತ್ಯಾಚಾರದಿಂದ ಮಹಿಳೆಯ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ತಿಳಿಸಿದ ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್ ಮತ್ತು ಎಂ.ಆರ್ ಶಾ ಅವರ ಪೀಠ, ಸಂತ್ರಸ್ತೆ ಮತ್ತು ಆಕೆಯ ಆತ್ಯಾಚಾರಿ ವಿವಾಹಿತರಾಗಿದ್ದು ತಮ್ಮತಮ್ಮ ಪರಿವಾರಗಳ ಕಾಳಜಿವಹಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ಅಪರಾಧವನ್ನು ಅಸಿಂಧು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳು ಆಧುನಿಕ ಸಮಾಜದಲ್ಲಿ ಹೆಚ್ಚಾಗುತ್ತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಿಸಿದ್ದಾರೆ.

ಛತ್ತೀಸ್‌ಗಡದಲ್ಲಿ ವೈದ್ಯರಾಗಿರುವ ವ್ಯಕ್ತಿಯೊಬ್ಬರು ತನ್ನನ್ನು 2013ರಲ್ಲಿ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದಾಖಲಿಸಿದ ದೂರಿನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಛತ್ತೀಸ್‌ಗಡದ ಬಿಲಾಸ್‌ಪುರದ ನಿವಾಸಿಯಾಗಿರುವ ಮಹಿಳೆ ಆರೋಪಿಯೊಂದಿಗೆ 2009ರಿಂದ ಪರಿಚಿತರಾಗಿದ್ದು, ಪ್ರೇಮ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತ ಮಹಿಳೆಯ ಜೊತೆ ಆರೋಪಿ ವೈದ್ಯ ಮದುವೆಯಾಗುವ ಭರವಸೆಯ ಹಿನ್ನೆಲೆಯಲ್ಲಿ ದೈಹಿಕ ಸಂಬಂಧ ಬೆಳೆಸಿದ್ದ. ಆದರೆ ನಂತರ ಇನ್ನೋರ್ವ ಯುವತಿಯೊಂದಿಗೆ ನಿಶ್ಚಿತಾರ್ಥ ನಡೆಸಿ ಸಂತ್ರಸ್ತೆಯನ್ನು ವಂಚಿಸಿದ್ದ. ಈ ಕುರಿತು ದೂರು ದಾಖಲಾದ ನಂತರ ಆರೋಪಿಯನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಲಾಗಿತ್ತು.

ಇದು ಖಂಡಿತವಾಗಿಯೂ ಅತ್ಯಾಚಾರವಾಗಿದೆ. ಜೊತೆಗೆ ಇದೊಂದು ಮೋಸ ಮತ್ತು ವಂಚನೆಯ ಸ್ಪಷ್ಟ ನಿದರ್ಶನ. ಒಂದು ವೇಳೆ, ನಿನ್ನನ್ನು ಮದುವೆಯಾಗುವ ಯಾವುದೇ ಉದ್ದೇಶ ನನಗಿಲ್ಲ ಎಂದು ಆರೋಪಿ ಮೊದಲೇ ಹೇಳಿದ್ದರೆ ಬಹುಶಃ ಸಂತ್ರಸ್ತೆ ದೈಹಿಕ ಸಂಬಂಧ ಬೆಳೆಸಲು ಅವಕಾಶ ನೀಡುತ್ತಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News