ಮ್ಯಾನ್ಮಾರ್ ಜೈಲಿನಲ್ಲಿರುವ ರಾಯ್ಟರ್ಸ್ ಪತ್ರಕರ್ತರಿಗೆ ಪ್ರತಿಷ್ಠಿತ ‘ಪುಲಿಟ್ಝರ್ ಪ್ರಶಸ್ತಿ’

Update: 2019-04-16 11:40 GMT

ನ್ಯೂಯಾರ್ಕ್, ಎ.16: ಮ್ಯಾನ್ಮಾರ್ ನ ಬೌದ್ಧ ಧರ್ಮೀಯ ಗ್ರಾಮಸ್ಥರು ಹಾಗೂ ಭದ್ರತಾ ಪಡೆಗಳಿಂದ ಇನ್ನ್ ದಿನ್ ಎಂಬ ಗ್ರಾಮದಲ್ಲಿ 10 ಮಂದಿ ರೋಹಿಂಗ್ಯ ಮುಸ್ಲಿಮರ ನರಮೇಧ ಪ್ರಕರಣವನ್ನು ಬಹಿರಂಗಪಡಿಸಿ ಜೈಲು ಪಾಲಾಗಿರುವ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಯುವ ಪತ್ರಕರ್ತರಾದ ವಾ ಲೋನ್ ಹಾಗೂ ಕ್ಯಾವ್ ಸೋ ಊ ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಝರ್ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಇಬ್ಬರೂ ಮ್ಯಾನ್ಮಾರ್ ನಾಗರಿಕರಾಗಿದ್ದು, ನರಮೇಧವನ್ನು ಬಹಿರಂಗ ಪಡಿಸಿ ತನಿಖಾ ವರದಿ ಮಾಡಿದ ತಪ್ಪಿಗೆ ಕಳೆದ 490 ದಿನಗಳಿಂದ ಜೈಲಿನಲ್ಲಿದ್ದಾರೆ.

ಇಬ್ಬರೂ ಗ್ರಾಮದಲ್ಲಿ ಸಾಮೂಹಿಕ ಸಮಾಧಿಯನ್ನು ಪತ್ತೆ ಹಚ್ಚಿದ್ದು ಅಲ್ಲಿ ನೆಲದಲ್ಲಿ ಮನುಷ್ಯರ ಮೂಳೆಗಳನ್ನೂ ನೋಡಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆರೋಪಿಗಳು ಹಾಗೂ ಸಂತ್ರಸ್ತರ ಕುಟುಂಬಗಳಿಂದ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದರು.

ಹತ್ತು ಮಂದಿ ಸಂತ್ರಸ್ತರು ಮೊಣಕಾಲೂರಿ ನಿಂತಿರುವ ಎರಡು ಫೋಟೋಗಳು ಹಾಗೂ ಮೂರನೆಯದರಲ್ಲಿ ಅವರ ಛಿದ್ರಗೊಂಡ ಮೃತದೇಹಗಳಿರುವ ಫೋಟೋವನ್ನೂ ಅವರು ಸಂಗ್ರಹಿಸಿದ್ದರು. ಆದರೆ ಡಿಸೆಂಬರ್ 2017ರಲ್ಲಿ ಅವರು ವರದಿ ಪೂರ್ತಿಗೊಳಿಸುವ ಮುನ್ನವೇ ಅವರನ್ನು ಬಂಧಿಸಲಾಗಿತ್ತು.  ನಂತರ  ಅವರ ಸಹೋದ್ಯೋಗಿಗಳು ವರದಿ ಪೂರ್ಣಗೊಳಿಸಿ ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಿದ್ದರು. ದೇಶದ ಅಧಿಕೃತ ಗೌಪ್ಯತಾ ಕಾಯಿದೆಯನ್ನು ಉಲ್ಲಂಘಿಸಿದ್ದಕ್ಕೆ ಅವರನ್ನು ಸೆಪ್ಟೆಂಬರ್ ತಿಂಗಳಲ್ಲಿ ಏಳು ವರ್ಷಗಳ  ಜೈಲು ಶಿಕ್ಷೆಗೆ ಗುರಿ ಪಡಿಸಲಾಗಿತ್ತು.

ಬ್ರೇಕಿಂಗ್ ನ್ಯೂಸ್ ಛಾಯಾಗ್ರಹಣ ವಿಭಾಗದಲ್ಲಿ ರಾಯ್ಟರ್ಸ್ ನ ಇಬ್ಬರು ಛಾಯಾಗ್ರಾಹಕರಾದ ಕಿಮ್ ಕ್ಯುಂಗ್ ಹೂನ್ ಹಾಗೂ ಮೈಕ್ ಬ್ಲೇಕ್ ಅವರಿಗೆ ಪ್ರಶಸ್ತಿ ದೊರಕಿದೆ. ಸೆಂಟ್ರಲ್ ಅಮೆರಿಕಾದಿಂದ ಅಮೆರಿಕಾಗೆ ತೆರಳಲು ಬಯಸಿದ ವಲಸಿಗರು ಅಮೆರಿಕಾದ ಗಡಿಯಲ್ಲಿ ಪಡುತ್ತಿರುವ ಬವಣೆಗಳ ಚಿತ್ರಗಳನ್ನು ಈ ಇಬ್ಬರು ಕ್ಲಿಕ್ಕಿಸಿದ್ದರು.

ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಷಿಂಗ್ಟನ್ ಪೋಸ್ಟ್ ಕೂಡ ತಲಾ ಎರಡು 'ಪುಲಿಟ್ಝರ್ ಪ್ರಶಸ್ತಿ'ಗಳಿಗೆ ಭಾಜನವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News