ಕನಿಮೋಳಿ ನಿವಾಸದ ಮೇಲೆ ದಾಳಿ ಮಾಡಿದ ಬಳಿಕ ತೆರಿಗೆ ಅಧಿಕಾರಿಗಳು ಹೇಳಿದ್ದೇನು ಗೊತ್ತೇ ?

Update: 2019-04-17 03:44 GMT

ಚೆನ್ನೈ, ಎ. 17 : ಡಿಎಂಕೆ ನಾಯಕಿ ಕನಿಮೋಳಿಯವರ ನಿವಾಸದ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ ತೆರಿಗೆ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ಇವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ದಾಸ್ತಾನು ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿತ್ತು ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಯಾವ ಪ್ರಕರಣವನ್ನೂ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಶಾಸಕಿಯೂ ಆಗಿರುವ ಕನಿಮೋಳಿ ಅವರ ಸಹೋದರ ಎಂ.ಕೆ. ಸ್ಟಾಲಿನ್ ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಹಣ ಹಂಚಲು ಕನಿಮೋಳಿ ನಿವಾಸದ ಮೊದಲ ಮಹಡಿಯಲ್ಲಿ ಭಾರಿ ಪ್ರಮಾಣದ ನಗದು ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಆಧಾರದಲ್ಲಿ ಅಧಿಕಾರಿಗಳು ಕನಿಮೋಳಿ ನಿವಾಸಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಶೋಧ ಕಾರ್ಯಾಚರಣೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಕನಿಮೋಳಿ, "ನನ್ನಲ್ಲಿ ಭೀತಿ ಹುಟ್ಟಿಸುವ ಸಲುವಾಗಿ ಈ ದಾಳಿ ನಡೆಸಲಾಗಿದೆ. ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ಮೋದಿ ಮೈತ್ರಿಕೂಟದ ಭಾಗವಾಗಿವೆ. ವಿರೋಧ ಪಕ್ಷಗಳಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿವೆ" ಎಂದು ಟೀಕಿಸಿದ್ದಾರೆ.

"ರಾಜ್ಯ ಬಿಜೆಪಿ ಮುಖ್ಯಸ್ಥ ತಮಿಳಿಸಾಯಿ ಸೌಂದರರಾಜನ್ ನಿವಾಸದಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ. ಯಾಕೆ ದಾಳಿ ನಡೆಸುತ್ತಿಲ್ಲ ? ಆದಾಯ ತೆರಿಗೆ, ಸಿಬಿಐ, ನ್ಯಾಯಾಂಗ ಮತ್ತು ಇದೀಗ ಚುನಾವಣಾ ಆಯೋಗವನ್ನು ಮೋದಿ ಬಳಸಿಕೊಳ್ಳುತ್ತಿದ್ದಾರೆ. ಸೋಲುವ ಭೀತಿಯಿಂದ ಇಂಥ ಕ್ರಮಕ್ಕೆ ಮುಂದಾಗಿದ್ದಾರೆ" ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳು ಹಾಗೂ 18 ವಿಧಾನಸಭಾ ಕ್ಷೇತ್ರಗಳ ಮತದಾನ ಗುರುವಾರ ನಡೆಯಲಿದೆ. ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಆಯೋಗ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News