ದಿನಕರನ್ ಬೆಂಬಲಿಗನ ಅಂಗಡಿ ಮೇಲೆ ಅಧಿಕಾರಿಗಳ ದಾಳಿ: ಗಾಳಿಯಲ್ಲಿ ಗುಂಡು

Update: 2019-04-17 04:37 GMT

ಥೇಣಿ (ತಮಿಳುನಾಡು), ಎ. 17: ಚುನಾವಣಾ ಆಯೋಗ ನೇಮಿಸಿದ ಕಣ್ಗಾವಲು ತಂಡ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ತಮಿಳುನಾಡಿನ ಥೇಣಿ ಲೋಕಸಭಾ ಕ್ಷೇತ್ರದಲ್ಲಿ ಎಎಂಎಂಕೆ ಮುಖಂಡ ಟಿ.ಟಿ.ವಿ. ದಿನಕರ್ ಬೆಂಬಲಿಗರಿಗೆ ಸೇರಿದ ವ್ಯಾಪಾರ ಮಳಿಗೆಯೊಂದರ ಮೇಲೆ ದಾಳಿ ನಡೆಸಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಂಡಿದೆ.

ದಾಳಿಗೆ ಅಡ್ಡಿ ಪಡಿಸಿದ ಎಎಂಎಂಕೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಮತದಾರರಿಗೆ ವಿತರಿಸುವ ಸಲುವಾಗಿ ಭಾರಿ ಪ್ರಮಾಣ ನಗದು ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ತಂಡ ಆಗಮಿಸುತ್ತಿದ್ದಂತೆ ಅಂಗಡಿ ಮಾಲಕ ಬಾಗಿಲು ಮುಚ್ಚಿ ಪರಾರಿಯಾಗಿದ್ದಾನೆ. ಈ ಹಂತದಲ್ಲಿ ಎಎಂಎಂಕೆ ಬೆಂಬಲಿಗರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಆರಂಭವಾಯಿತು. ಕೊನೆಗೆ ಗುಂಪು ಚದುರಿಸಲು ಪೊಲೀಸರು ನಾಲ್ಕು ಸುತ್ತು ಗುಂಡು ಹಾರಿಸಬೇಕಾಯಿತು.

ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಭಾರಿ ಮೊತ್ತದ ನಗದು ಇದ್ದ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ. "ಪ್ಯಾಕೆಟ್‌ಗಳ ಮೇಲೆ ವಾರ್ಡ್ ಸಂಖ್ಯೆ ಮತ್ತು ಮತದಾರರ ಸಂಖ್ಯೆಯನ್ನೂ ನಮೂದಿಸಲಾಗಿದ್ದು, ಪ್ರತಿ ಪೊಟ್ಟಣದಲ್ಲಿ 300 ರೂಪಾಯಿ ಎಂದು ಬರೆಯಲಾಗಿತ್ತು. ದಾಳಿ ಮುಂದುವರಿದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News