ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ ಬಗ್ಗೆ ರಾಬರ್ಟ್ ವಾದ್ರಾ ಪ್ರತಿಕ್ರಿಯೆ ಏನು ಗೊತ್ತಾ?

Update: 2019-04-17 05:01 GMT

ಹೊಸದಿಲ್ಲಿ, ಎ.17: ವಾರಾಣಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ ಎಂಬ ದಟ್ಟ ವದಂತಿಯ ಮಧ್ಯೆ ಅವರ ಪತಿ ರಾಬರ್ಟ್ ವಾದ್ರಾ ಈ ಕುರಿತು ಪ್ರತಿಕ್ರಿಯಿಸುತ್ತಾ,‘‘ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರಮಿಜೀವಿ. ಫಲಿತಾಂಶ ನಮ್ಮ ಪರ ಬರಬಹುದು. ಆ ಕ್ಷೇತ್ರದ ಜನರು ಜನರು ಆಕ್ರೋಶಗೊಂಡಿದ್ದು, ಬದಲಾವಣೆ ಬಯಸುತ್ತಿದ್ದಾರೆ. ದೇಶಕ್ಕೂ ಬದಲಾವಣೆಯ ಅಗತ್ಯವಿದೆ’’ ಎಂದರು.

ಪ್ರಿಯಾಂಕಾ ಅವರು ಮೋದಿ ವಿರುದ್ಧ ಉತ್ತಮ ಅಭ್ಯರ್ಥಿಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾದ್ರಾ,‘‘ಆಕೆ ಕಠಿಣ ಶ್ರಮಪಡುತ್ತಾಳೆ. ಜನರು ಬದಲಾವಣೆ ಬಯಸುತ್ತಿದ್ದಾರೆ'' ಎಂದರು.

ಪ್ರಿಯಾಂಕಾ ಅವರು ಮೋದಿಗೆ ಪ್ರಬಲ ಸ್ಪರ್ಧೆ ನೀಡುತ್ತಾರೆಯೇ? ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಾದ್ರಾ,‘‘ಖಂಡಿತವಾಗಿಯೂ ಕಠಿಣ ಸ್ಪರ್ಧೆ ಒಡ್ಡಬಲ್ಲರು’’ ಎಂದರು.

 ಗಾಂಧಿ ಕುಟುಂಬದ ಸದಸ್ಯರಾದ ವಾದ್ರಾ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾರನ್ನು ಕಣಕ್ಕಿಳಿಸುವ ವದಂತಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಪ್ರಿಯಾಂಕಾ ವಾರಾಣಸಿಯಲ್ಲಿ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಪ್ರಬಲ ವಿರೋಧ ಪಕ್ಷಗಳಾದ ಎಸ್ಪಿ ಹಾಗೂ ಬಿಎಸ್ಪಿ ಪ್ರಿಯಾಂಕಾರನ್ನು ಒಮ್ಮತದ ಅಭ್ಯರ್ಥಿ ಎಂದು ಒಪ್ಪಿಕೊಂಡರೆ ಮಾತ್ರ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಿಯಾಂಕಾ ಗಾಂಧಿಯನ್ನು ಸ್ಪರ್ಧೆಗಿಳಿಸುವ ಯೋಚನೆಯ ಹಿಂದೆ ಮೋದಿಯವರನ್ನು ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಟ್ಟಿಹಾಕುವ ತಂತ್ರವಿದೆ.

ರಾಯ್‌ಬರೇಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ, ವಾರಾಣಸಿಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

 ಕಾರ್ಯಕರ್ತರು ಪ್ರಿಯಾಂಕಾರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಅವರು,‘‘ವಾರಾಣಸಿಯಲ್ಲಿ ಸ್ಪರ್ಧಿಸಿದರೆ ಹೇಗೆ? ಎಂದು ಮರು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News