ಹೃದಯದ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದ್ದ ನವಜಾತ ಶಿಶು ಮಂಗಳೂರಿನಿಂದ ಕೊಚ್ಚಿಗೆ 5.30 ಗಂಟೆಯಲ್ಲಿ ತಲುಪಿದ್ದು ಹೀಗೆ

Update: 2019-04-17 05:34 GMT

ತಿರುವನಂತಪುರಂ : ಕೇರಳದ 15 ದಿನ ಪ್ರಾಯದ ನವಜಾತ ಶಿಶುವಿನ ಪಾಲಿಗೆ ಅದೊಂದು ಸಮಯದ ವಿರುದ್ಧದ ಓಟವಾಗಿತ್ತು. ಹೃದಯ ಕವಾಟದ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಈ ಶಿಶುವಿನ ಪ್ರಾಣವನ್ನು ಉಳಿಸು ಎಂದು ಇಡೀ ಕೇರಳ ರಾಜ್ಯವೇ ಆ ಭಗವಂತನಿಗೆ ಮೊರೆಯಿಡುತ್ತಿರುವಂತೆಯೇ ಮಗುವನ್ನು ಹೊತ್ತ ಅಂಬುಲೆನ್ಸ್  ಮಂಗಳೂರಿನಿಂದ 400 ಕಿಮೀ ದೂರವಿರುವ ಕೇರಳದ ಕೊಚ್ಚಿಗೆ ಹೊರಟೇ ಬಿಟ್ಟಿತು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಟಿದ್ದ ಅಂಬುಲೆನ್ಸ್ ಕೊಚ್ಚಿಯ ಅಮೃತ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಇಲ್ಲಿಗೆ ಸಂಜೆ 4.30ರ ಸುಮಾರಿಗೆ  ತಲುಪಿತ್ತು.

ಅಂಬುಲೆನ್ಸ್ ಪಯಣವನ್ನು ಫೇಸ್ ಬುಕ್ ನಲ್ಲಿ ನೇರ  ಪ್ರಸಾರ ಕೂಡ ಮಾಡಲಾಗಿತ್ತಲ್ಲದೆ ಈ ಮೂಲಕ ಜನರಲ್ಲಿ ಜಾಗೃತಿಯುಂಟು ಮಾಡಿ ಅಂಬುಲೆನ್ಸ್ ಗೆ ಹಾದಿ ಸುಗಮವಾಗಲು ಗ್ರೀನ್ ಕಾರಿಡಾರ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು.

ಮೊದಲು ಶಿಶುವನ್ನು ವಿಮಾನದ ಮೂಲಕ ಸಾಗಿಸಲು ಯೋಚಿಸಲಾಗಿತ್ತಾದರೂ ಇದರಿಂದ ದೇಹದೊತ್ತಡದಲ್ಲಿ ಏರುಪೇರಾಗುವ ಸಾಧ್ಯತೆಯಿರುವುದರಿಂದ ವೈದ್ಯರು ಅದಕ್ಕೆ ಅನುಮತಿ ನಿರಾಕರಿಸಿದ್ದರಿಂದ ರಸ್ತೆ ಮೂಲಕವೇ ಮಗುವನ್ನು ಸಾಗಿಸಲು ನಿರ್ಧರಿಸಲಾಗಿತ್ತು.

ಈ ವಿಚಾರ ತಿಳಿದ ಹಲವು ಸಹೃದಯರು ರಸ್ತೆಗಿಳಿದು ಅಂಬುಲೆನ್ಸ್ ನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚೈಲ್ಡ್ ಪ್ರೊಟೆಕ್ಟ್ ಟೀಂ ಎಂಬ ಎನ್‍ಜಿಒ ಮಗುವಿನ  ಪ್ರಯಾಣಕ್ಕೆ ಸಕಲ ಏರ್ಪಾಟು ಮಾಡಲು ಸಹಕರಿಸಿತ್ತು.

ಪೊಲೀಸ್ ಇಲಾಖೆ ಹಾಗೂ ಇತರ ಎನ್‍ಜಿಒಗಳೂ ಈ ಕೈಂಕರ್ಯಕ್ಕೆ ಸಹಾಯ ಹಸ್ತ ಚಾಚಿದ್ದವು. ಮಗುವಿನ ಚಿಕಿತ್ಸೆಯ ಎಲ್ಲಾ ವೆಚ್ಚವನ್ನೂ ಭರಿಸುವುದಾಗಿ ಕೇರಳ ಸರಕಾರ  ಹೇಳಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಟ್ವೀಟ್ ಮಾಡಿ `ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಮಗು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪುವಂತೆ ಸಹಕರಿಸಿ'' ಎಂದು ಟ್ವೀಟ್ ಮಾಡಿದ್ದರು.

ಕಾಸರಗೋಡಿನ  ಸಾನಿಯ ಹಾಗೂ ಮಿತಾ ದಂಪತಿಯ ಈ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಮಗುವಿನ ಸ್ಥಿತಿ ಸೋಮವಾರ ರಾತ್ರಿ ವಿಷಮಿಸಿದ್ದರಿಂದ ಕೊಚ್ಚಿಯ ಆಸ್ಪತ್ರೆಗೆ ಕೊಂಡು ಹೋಗುವ ನಿರ್ಧಾರ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News