ನ್ಯಾಯಾಲಯದ ಆದೇಶದ ಬಳಿಕ ಭಾರತದಲ್ಲಿ 'ಟಿಕ್ ಟೋಕ್' ಬ್ಲಾಕ್ ಮಾಡಿದ ಗೂಗಲ್

Update: 2019-04-17 06:27 GMT

ಹೊಸದಿಲ್ಲಿ, ಎ.17: ಮದ್ರಾಸ್ ಹೈಕೋರ್ಟ್ ಚೀನಾದ ಜನಪ್ರಿಯ ಆ್ಯಪ್ ಟಿಕ್ ಟೊಕ್‌ನ ಡೌನ್‌ಲೋಡ್‌ಗೆ ನಿಷೇಧಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಭಾರತದಲ್ಲಿ ಟಿಕ್ ಟೋಕ್ ನ್ನು ಬ್ಲಾಕ್ ಮಾಡಿದೆ. 

ಟಿಕ್ ಟೋಕ್ ಆ್ಯಪ್‌ಗೆ ವಿಧಿಸಲಾಗಿರುವ ನಿಷೇಧವನ್ನು ಹಿಂಪಡೆಯಲು ಚೀನಾದ ಬೈಟಿಡ್ಯಾನ್ಸ್ ಟೆಕ್ನಾಲಜಿ ಮಾಡಿರುವ ಕೋರಿಕೆಯನ್ನು ಮಂಗಳವಾರ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಗೂಗಲ್ ಈ ಹೆಜ್ಜೆ ಇಟ್ಟಿದೆ. ಹೈಕೋರ್ಟ್ ಎ.3ರಂದು ನೀಡಿದ ತನ್ನ ತೀರ್ಪಿನಲ್ಲಿ ಟಿಕ್ ಟೋಕ್ ಆ್ಯಪನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಕೇಂದ್ರ ಸರಕಾರ ಆ್ಯಪಲ್ ಹಾಗೂ ಗೂಗಲ್‌ಗೆ ಪತ್ರವನ್ನು ಬರೆದಿದ್ದು ರಾಜ್ಯ ನ್ಯಾಯಾಲಯದ ಆದೇಶವನ್ನು ಗೌರವಿಸುವಂತೆ ಸೂಚಿಸಿತ್ತು ಎಂದು ಐಟಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕ್ ಟೋಕ್ ಆ್ಯಪ್, ಆ್ಯಪಲ್‌ನಲ್ಲಿ ಈಗಲೂ ಲಭ್ಯವಿದೆ. ಆದರೆ, ಭಾರತದಲ್ಲಿ ಗೂಗಲ್ ಸ್ಟೋರ್‌ನಲ್ಲಿ ಇದು ಇನ್ನು ಮುಂದೆ ಲಭ್ಯವಿರುವುದಿಲ್ಲ. ವೈಯಕ್ತಿಕ ಆ್ಯಪ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸ್ಥಳೀಯ ಕಾನೂನನ್ನು ನಾವು ಗೌರವಿಸುತ್ತೇವೆ ಎಂದು ಗೂಗಲ್ ತಿಳಿಸಿದೆ. ಆ್ಯಪಲ್ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಗೂಗಲ್ ಹೆಜ್ಜೆಯ ಬಗ್ಗೆ ಟಿಕ್‌ಟೊಕ್ ಕೂಡ ವೌನವಹಿಸಿದೆ.

ಟಿಕ್ ಟೋಕ್ ಆ್ಯಪ್ ಬಳಕೆದಾರರಿಗೆ ಕಿರು ವಿಡಿಯೋವನ್ನು ರಚಿಸಲು ಹಾಗೂ ಹಂಚಲು ಅನುಕೂಲಕರವಾಗಿದ್ದು,ಭಾರತದಲ್ಲಿ ಈ ಆ್ಯಪ್ ತುಂಬಾ ಜನಪ್ರಿಯತೆ ಪಡೆದಿದೆ. ಆ್ಯಪ್‌ನಲ್ಲಿನ ಅಂಶ ಅನುಚಿತವಾಗಿದೆ ಎಂದು ಕೆಲವು ರಾಜಕಾರಣಿಗಳು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News