ಉತ್ತರ ಕೊರಿಯದ ಪ್ರಧಾನ ಪರಮಾಣು ಸ್ಥಾವರದಲ್ಲಿ ಚಲನವಲನ: ಉಪಗ್ರಹ ಚಿತ್ರಗಳಿಂದ ಬಹಿರಂಗ

Update: 2019-04-17 15:43 GMT

ವಾಶಿಂಗ್ಟನ್, ಎ. 17: ಉತ್ತರ ಕೊರಿಯದ ಪ್ರಧಾನ ಪರಮಾಣು ಸ್ಥಾವರದಲ್ಲಿ ಚಲನವಲನಗಳು ನಡೆಯುತ್ತಿವೆ ಎನ್ನುವುದನ್ನು ಕಳೆದ ವಾರ ತೆಗೆಯಲಾದ ಉಪಗ್ರಹ ಚಿತ್ರಗಳು ತೋರಿಸಿವೆ. ಇವು ವಿಕಿರಣಶೀಲ ವಸ್ತುಗಳನ್ನು ಬಾಂಬ್ ಇಂಧನವನ್ನಾಗಿಸಲು ನಡೆಸಲಾಗುತ್ತಿರುವ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಚಲನವಲನಗಳಾಗಿರಬಹುದು ಎಂದು  ಅಮೆರಿಕದ ಸಂಸ್ಥೆ ‘ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟಡೀಸ್’ ಮಂಗಳವಾರ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ಎರಡನೇ ಶೃಂಗಸಭೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಈ ಚಲನವಲನಗಳಿಗೆ ಮಹತ್ವ ಬಂದಿದೆ.

ಉತ್ತರ ಕೊರಿಯದ ಪರಮಾಣು ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿ ಉಭಯ ನಾಯಕರ ನಡುವೆ ಫೆಬ್ರವರಿ ತಿಂಗಳ ಕೊನೆಯಲ್ಲಿ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಎರಡನೇ ಶೃಂಗ ಸಮ್ಮೇಳನ ನಡೆದಿತ್ತು. ಆದರೆ, ಯಾವುದೇ ಒಪ್ಪಂದಕ್ಕೆ ಬರದೆ ಶೃಂಗಸಭೆ ಅರ್ಧದಲ್ಲೇ ಕೊನೆಗೊಂಡಿತ್ತು.

ಎಪ್ರಿಲ್ ೧೨ರಂದು ತೆಗೆದ ಉತ್ತರ ಕೊರಿಯದ ಯೊಂಗ್‌ಬ್ಯೋನ್ ಪರಮಾಣು ಸ್ಥಾವರ ಚಿತ್ರಗಳು, ಯುರೇನಿಯಮ್ ಸಂವರ್ಧನೆ ಘಟಕ ಮತ್ತು ರೇಡಿಯೊಕೆಮಿಸ್ಟ್ರಿ ಪ್ರಯೋಗಾಲಯದ ಸಮೀಪ ಐದು ವಿಶೇಷ ರೈಲ್‌ಕಾರುಗಳನ್ನು ತೋರಿಸಿವೆ ಎಂದು  ಅಮೆರಿಕದ ಸಂಸ್ಥೆ ತಿಳಿಸಿದೆ.

ಅವುಗಳು ವಿಕರಣಶೀಲ ಪದಾರ್ಥಗಳನ್ನು ಹಸ್ತಾಂತರಿಸುತ್ತಿದ್ದವು ಎಂಬುದಾಗಿ ಭಾವಿಸಬಹುದಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News