ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಶೋಭಾ, ರಘುಪತಿ ಭಟ್ ವಿರುದ್ಧ ಪ್ರಕರಣ ದಾಖಲು

Update: 2019-04-17 16:25 GMT

ಉಡುಪಿ, ಎ.17: ಚುನಾವಣಾ ಆಯೋಗ ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿ ಕೋಡಿಬೆಂಗ್ರೆಯಿಂದ ಗುಜ್ಜರಬೆಟ್ಟುವರೆಗೆ ಪಾದಯಾತ್ರೆ ಹಾಗೂ ಅದರಲ್ಲಿ ಮಕ್ಕಳನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿ ಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಇತರರು ಚುನಾ ವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದುಕೊಳ್ಳದೆ ಎ.15ರಂದು ಸಂಜೆ ವೇಳೆ ಪಾದಯಾತ್ರೆ ನಡೆಸಿದ್ದು, ಇದರಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಪ್ರಚಾರ ಸಭೆ ನಡೆಸುವ ಮೂಲಕ ನೀತಿ ಸಂಹಿತೆ ಯನ್ನು ಉಲ್ಲಂಘಿಸಲಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿ ಮೋಹನ್ ರಾಜ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಟಿಟ್ವರ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆಯ ಟ್ವೀಟರ್ ಖಾತೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಹಗೆ, ದ್ವೇಷ ಉಂಟು ಮಾಡುವ ಚಿತ್ರವನ್ನು ಪೋಸ್ಟ್ ಮಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೋಭಾ ಕರಂದ್ಲಾಜೆ ಟ್ವಿಟರ್ ಖಾತೆಯಲ್ಲಿ ಎ.13ರಂದು ರಾಮನವಮಿಯ ಪ್ರಯುಕ್ತ ಶುಭಾಶಯ ಕೋರುವಾಗ ಶ್ರೀರಾಮನು ಬಿಲ್ಲಿನಿಂದ ಬಾಣ ಬಿಡುವ ಚಿತ್ರ ಪ್ರಕಟಿಸಿದ್ದರು. ಬಾಣದಲ್ಲಿ ನರೇಂದ್ರ ಮೋದಿಯವರ ಚಿತ್ರವಿದ್ದು, ಈ ಬಾಣವನ್ನು ರಾವಣನ ದಶಮುಖಗಳಿರುವ ಹಲವು ವಿರೋಧ ಪಕ್ಷದ ಮುಖಂಡದ ಮುಖಗಳ ಭಾವಚಿತ್ರಕ್ಕೆ ಗುರಿ ಮಾಡುವಂತೆ ಇತ್ತು ಎನ್ನಲಾಗಿದೆ.

ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಹಗೆ, ದ್ವೇಷ ಉಂಟು ಮಾಡುವ ಚಿತ್ರವನ್ನು ಪೋಸ್ಟ್ ಮಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಉಡುಪಿ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್‌ನ ನಾಗರಾಜ್ ಕೆ.ವಿ. ಉಡುಪಿ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲಾ ಚುನಾ ವಣಾಧಿಕಾರಿಯ ಲಿಖಿತ ಆದೇಶದ ಮೇರೆಗೆ ದೂರು ನೀಡಿದ್ದಾರೆ.

ಸುಳ್ಳು ಮಾಹಿತಿ ನೀಡಿದ ವ್ಯಕ್ತಿ ವಿರುದ್ಧ ದೂರು

ಕೋಟ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತು ಸುಳ್ಳು ದೂರು ನೀಡಿದ ವ್ಯಕ್ತಿಯ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.15 ರಂದು ರಾತ್ರಿ ವೇಳೆ ಚಂದ್ರ ಎಂಬವರು ಸಹಾಯಕ ಚುನಾವಣಾಧಿ ಕಾರಿಗೆ ಕರೆ ಮಾಡಿ ಶಿರಿಯಾರ ಕಲ್ಲು ಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಸೇರಿಕೊಂಡು ಶಾಸಕ ಶ್ರೀನಿವಾಸ ಶೆಟ್ಟಿ ಬಿಜೆಪಿಯ ಚುನಾವಣಾ ಪ್ರಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ಅದರಂತೆ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ತಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಯಾವುದೇ ಚುನಾವಣಾ ಪ್ರಚಾರ ಮತ್ತು ವಾಹನ ನಿಂತಿರುವುದು ಕಂಡು ಬಂದಿರುವುದಿಲ್ಲ. ಈ ಬಗ್ಗೆ ಮೇಲಾಧಿ ಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಚಂದ್ರ ವಿರುದ್ಧ ಸೂಕ್ತ ಕ್ರಮ ಜರುಗಿಸು ವಂತೆ ಪ್ರಕಾಶ್ಚಂದ್ರ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News