ಮಂಗಳೂರಿನಲ್ಲಿ ನಕಲಿ ಮತದಾರರ ಚೀಟಿ: ಆರೋಪ

Update: 2019-04-17 16:46 GMT

ಮಂಗಳೂರು, ಎ.17: ಲೋಕಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದಂತೆ ಮಂಗಳೂರು ಕ್ಷೇತ್ರದಲ್ಲಿ ನಕಲಿ ಮತದಾರರ ವಿವರ ಬಹಿರಂಗ ಗೊಂಡಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿಯು ಮಂಗಳೂರು ಪೊಲೀಸರಿಗೆ ದೂರು ನೀಡಿದೆ.

ಗುರುವಾರ ಮತದಾನ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಎಲ್ಲ ಮತ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಎರಡೆರಡು ಮತದಾನ ಚೀಟಿ ಹೊಂದಿದವರನ್ನು ಪತ್ತೆ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಮಂಗಳೂರು ನಗರದ ಮಣ್ಣಗುಡ್ಡೆ ಹಾಗೂ ಅಳಪೆ ಪ್ರದೇಶದಲ್ಲಿ ಸುಮಾರು 100 ನಕಲಿ ಮತದಾರರ ವಿವರಗಳು ಲಭ್ಯವಾಗಿವೆ. ಇವೆರಲ್ಲರೂ ಎರಡೆರಡು ಕಡೆಗಳಲ್ಲಿ ಹೆಸರನ್ನು ನೋಂದಾಯಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬರ್ಕೆ ಠಾಣೆಗೆ ಬುಧವಾರ ದೂರು ನೀಡಲಾಗಿದೆ. ನಗರದ ವೆಲೆನ್ಸಿಯಾ, ಕಂಕನಾಡಿ, ಬಿರ್ಕನಕಟ್ಟೆ, ಮಣ್ಣಗುಡ್ಡೆ, ಅಳಪೆಯಲ್ಲಿ ಇನ್ನೂ ಸುಮಾರು 3000 ನಕಲಿ ಮತದಾರರು ನೋಂದಣಿ ಮಾಡಿರುವ ವಿವರ ಲಭ್ಯವಾಗಿದೆ. ಈ ಎಲ್ಲ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಲಾಗುತ್ತಿದೆ ಎಂದು ಬಿಜೆಪಿ ತಿಳಿಸಿದೆ.

ಮಂಗಳೂರು ಕ್ಷೇತ್ರಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಕಲಿ ಮತದಾರರ ಸೇರ್ಪಡೆಯಾಗಿರುವ ವಿಚಾರ ಈ ಹಿಂದೆಯೇ ಪಕ್ಷದ ಗಮನಕ್ಕೆ ಬಂದಿತ್ತು. ಆದಕ್ಕೆ ಪೂರಕವಾದ ದಾಖಲೆಗಳು ಈಗ ಲಭ್ಯವಾಗಿವೆ. ಕಾಂಗ್ರೆಸ್ ಪಕ್ಷ ಕಳೆದ ಎರಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಇಂತಹ ಮೋಸದಾಟದಿಂದ ಗೆಲ್ಲುವ ಪ್ರಯತ್ನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೇರಳದ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಆದರೆ ಕಳೆದ ಚುನಾವಣೆಯಲ್ಲಿ ಅವರ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅದೇ ಕುತಂತ್ರವನ್ನು ಅನುಸರಿಸಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಮಂಗಳೂರು ನಗರವೊಂದರಲ್ಲೇ ಸುಮಾರು 5 ಸಾವಿರದಷ್ಟು ನಕಲಿ ಮತದಾರರ ನೋಂದಣಿ ಮಾಡಲಾಗಿದೆ. ಮುಖ್ಯವಾಗಿ ಇಲ್ಲಿ ಕಲಿಯಲು ಬರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಅಮಿಷವೊಡ್ಡಿ ಮತ ಪಟ್ಟಿಗೆ ಸೇರಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ದೂರು ನೀಡಿದ್ದರೂ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯವನ್ನು ಮಾಡಿಲ್ಲ ಎಂದು ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.

ಮಂಗಳೂರಿನಲ್ಲಿ ಎರಡೆರಡು ಕಡೆಗಳಲ್ಲಿ ಹೆಸರನ್ನು ನೋಂದಾಯಿಸಿಕೊಂಡು, ಮತದಾನ ಗುರುತಿನ ಚೀಟಿ ಹೊಂದಿರುವ ಬಗ್ಗೆ ದೂರು ಬಂದಿದೆ. ಆದರೆ ಇವು ನಕಲಿ ಮತದಾರರ ಚೀಟಿಗಳಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು.
- ಸೂರಜ್,
ಬರ್ಕೆ ಪೊಲೀಸ್ ಇನ್‌ಸ್ಪೆಕ್ಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News