ಮತದಾರರ ಪಟ್ಟಿಯಿಂದ ‘ಹೆಸರು’ ಡಿಲೀಟ್: ತನಿಖೆಗೆ ಜೆ.ಆರ್.ಲೋಬೊ ಆಗ್ರಹ

Update: 2019-04-18 09:19 GMT

ಮಂಗಳೂರು, ಎ.18: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯಿಂದ ಕೊನೆಯ ಕ್ಷಣದಲ್ಲಿ ‘ಹೆಸರು’ ಡಿಲೀಟ್ ಆಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜನವರಿ ಮತ್ತು ಮಾರ್ಚ್‌ನಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸುವಾಗ ಇದ್ದ ಹೆಸರುಗಳು ಇದೀಗ ನಾಪತ್ತೆಯಾಗಿವೆ. ಮತದಾನ ಮಾಡಲು ಮತಗಟ್ಟೆಗೆ ಹೋದಾಗಲೇ ಪಟ್ಟಿಯಿಂದ ಹೆಸರು ಅಳಿಸಲ್ಪಟ್ಟಿರುವುದು ತಿಳಿದುಬಂದಿದೆ. ಇದರಿಂದ ನೂರಾರು ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲಾಗದೆ ವಾಪಸ್ ಆಗಿದ್ದಾರೆ. ಇದು ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಯ ಗಮನಕ್ಕೆ ಬಾರದೆ ನಡೆದ ಕೃತ್ಯವಾಗಿದೆ. ಇದರ ಹಿಂದೆ ಚುನಾವಣಾ ಸಿಬ್ಬಂದಿ ವರ್ಗದ ಶಾಮೀಲಾತಿ ಇದೆ. ವ್ಯವಸ್ಥಿತ ಸಂಚು ಕೂಡ ಇದ್ದು, ಪಾರದರ್ಶಕತೆಯ ಬಗ್ಗೆಯೆ ಸಂಶಯವಿದೆ. ಹಾಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸಲೇಬೇಕಿದೆ ಎಂದು ಒತ್ತಾಯಿಸಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ತಾಪ್ತಿಯ 240 ಮತಗಟ್ಟೆಗಳಿದ್ದು, ಪ್ರತಿಯೊಂದು ಮತಗಟ್ಟೆಯಲ್ಲೂ ಕನಿಷ್ಠ 25ಕ್ಕೂ ಅಧಿಕ ಮಂದಿಯ ಹೆಸರು ಡಿಲೀಟ್ ಆಗಿವೆ. ಅಂದರೆ ಸುಮಾರು 5 ಸಾವಿರ ಮಂದಿಯ ಹೆಸರು ಡಿಲೀಟ್ ಆದಂತಾಗಿದೆ. ಒಟ್ಟಾರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಮಂದಿಯ ಹೆಸರು ಡಿಲೀಟ್ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಜೆ.ಆರ್.ಲೋಬೋ ಹೇಳಿದ್ದಾರೆ.

*ಆಧಾರ್ ಲಿಂಕ್ ಮಾಡಿ: ಮತದಾರರ ಗುರುತಿನ ಚೀಟಿಯು ಲೋಪದೋಷದಿಂದ ಕೂಡಿದೆ. ಪಟ್ಟಿಯಿಂದ ಹೆಸರು ನಾಪತ್ತೆ ಕೂಡ ಆಗಾಗ ಆಗುತ್ತಿರುತ್ತವೆ. ಹಾಗಾಗಿ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಿಸಬೇಕಿದೆ. ಆವಾಗ ಎರಡೆರಡು ಮತದಾರರ ಗುರುತಿನ ಚೀಟಿ ಇರುವುದನ್ನೂ ಕೂಡ ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಬಿ.ಇಬ್ರಾಹೀಂ, ಅಬ್ದುಲ್ ಸಲೀಂ, ವಿಶ್ವಾಸ್ ಕುಮಾರ್ ದಾಸ್, ನೀರಜ್ ಪಾಲ್, ಖಾಲಿದ್ ಉಜಿರೆ, ಅರುಣ್ ಕುವೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News