ಕುಂದಾಪುರ: ಅಪಘಾತಕ್ಕೀಡಾಗಿ ವಿಶ್ರಾಂತಿಯಲ್ಲಿದ್ದ ಯುವಕನಿಂದ ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ

Update: 2019-04-18 09:09 GMT

ಕುಂದಾಪುರ, ಎ.18: ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯಗೊಂಡು ಮನೆಯಲ್ಲೇ ಇದ್ದ್ದ ಕುಂದಾಪುರ ತಾಲೂಕಿನ ಉಳ್ತೂರಿನ ಯುವಕ, ಆ್ಯಂಬುಲೆನ್ಸ್‌ನಲ್ಲಿ ಬಂದು ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ತೆಕ್ಕಟ್ಟೆ ಸಮೀಪದ ಉಳ್ತೂರಿನ ಶಿವಪ್ಪ ಎಂಬವರ ಪುತ್ರ ಜಯಶೀಲ್ ಪೂಜಾರಿ(30) ಮೂರು ವಾರಗಳ ಹಿಂದೆ ಗೋಳಿಯಂಗಡಿ ಸಮೀಪ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ಇದರಿಂದ ಬಲ ಕಾಲಿಗೆ ತೀವ್ರತರವಾದ ಗಾಯಗೊಂಡ ಅವರು ಕುಂದಾರಪುರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. 10 ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ಜಯಶೀಲ್‌ಗೆ, ಮೂರು ತಿಂಗಳುಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದರು. ನಡೆಯಲು ಸಾಧ್ಯವಾಗದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಜಯಶೀಲ್, ಇಂದು ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಕುಟುಂಬಸ್ಥರಲ್ಲಿ ಒತ್ತಾಯಿಸಿದ್ದರು.

ಕೊನೆಗೆ ಗೆಳೆಯರೆಲ್ಲ ಸೇರಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಜಯಶೀಲ್ ಅವರನ್ನು ಉಳ್ತೂರು ಶಾಲೆಯಲ್ಲಿರುವ ಮತಗಟ್ಟೆಗೆ ಕರೆತಂದು ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.

ಎದ್ದು ನಿಲ್ಲಲು ಸಾಧ್ಯವಾಗದೆ ಸ್ಟ್ರೆಚ್ಚರ್ ನಲ್ಲಿ ಮಲಗಿಕೊಂಡೇ ತನ್ನ ಹಕ್ಕನ್ನು ಚಲಾಯಿಸಿದ ಜಯಶೀಲ್, ಈ ಮೂಲಕ ಮತದಾನಕ್ಕೆ ಹಿಂದೇಟು ಹಾಕುವವರಿಗೆ ಮಾದರಿಯಾದರು.

ಮತಗಟ್ಟೆ ಅಧಿಕಾರಿಗಳು ಕೂಡಾ ಜಯಶೀಲ್ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News