ಸುಳ್ಳು ಸುದ್ದಿಗೆ ಕುಖ್ಯಾತ ವೆಬ್ ಸೈಟ್ ಅನ್ನು ಸುಳ್ಳು ಸುದ್ದಿ ಪತ್ತೆ ಯೋಜನೆಗೆ ಸೇರಿಸಿಕೊಂಡ ಫೇಸ್ ಬುಕ್ !

Update: 2019-04-18 13:43 GMT

ಈಗಾಗಲೇ ವಿವಾದಕ್ಕೆ ಒಳಗಾಗಿರುವ ಫೇಸ್ ಬುಕ್ ನ ಫ್ಯಾಕ್ಟ್ ಚೆಕಿಂಗ್ ಪ್ರೋಗ್ರಾಮ್ ( ಸುಳ್ಳು ಸುದ್ದಿ ಪತ್ತೆಹಚ್ಚುವ ಯೋಜನೆ ) ಗೆ ಇತ್ತೀಚಿನ ಸೇರ್ಪಡೆ ಮತ್ತೆ ವಿವಾದಕ್ಕೆ ಕಾರಣವಾಗಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ. ಸುಳ್ಳು ಸುದ್ದಿ ಹರಡುವುದಕ್ಕೆ ಕುಖ್ಯಾತವಾಗಿರುವ, ಬಲಪಂಥೀಯ ಹಾಗು ಟ್ರಂಪ್ ಪರ ಮಾಧ್ಯಮ ಎಂದೇ ಗುರುತಿಸಿಕೊಂಡಿರುವ 'ಡೈಲಿ ಕಾಲರ್' ವೆಬ್ ಸೈಟ್ ಅನ್ನು ಫೇಸ್ ಬುಕ್ ಸುಳ್ಳು ಸುದ್ದಿ ಪತ್ತೆ ಹಚ್ಚುವ ಯೋಜನೆಗೆ ಪಾಲುದಾರನಾಗಿ ಸೇರಿಸಿಕೊಂಡಿದೆ!.

ಡೈಲಿ ಕಾಲರ್ ವೆಬ್ ಸೈಟ್ ನ ಭಾಗವಾಗಿರುವ CheckYourFact.com ಅನ್ನು ಸುಳ್ಳು ಸುದ್ದಿ ಪತ್ತೆ ಯೋಜನೆಗೆ ಅಮೇರಿಕಾದ ಮಾಧ್ಯಮ ಪಾಲುದಾರರಲ್ಲಿ ಒಬ್ಬರಾಗಿ ಸೇರಿಸಿಕೊಂಡಿದ್ದೇವೆ ಎಂದು ಫೇಸ್ ಬುಕ್ ಬುಧವಾರ ಘೋಷಿಸಿದೆ. ಈಗಾಗಲೇ ಫೇಸ್ ಬುಕ್ ನ ಈ ಯೋಜನೆಯ  ಪಾರದರ್ಶಕತೆ ಬಗ್ಗೆ ಪತ್ರಕರ್ತರು ಹಾಗು ಆಂತರಿಕ ಸಿಬ್ಬಂದಿ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಫೇಸ್ ಬುಕ್ ನಲ್ಲಿ ಹರಡದಂತೆ ಅದನ್ನು ಪತ್ತೆಹಚ್ಚಿ ತಡೆಯುವ ಈ ಯೋಜನೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ಹಲವಾರು ಅತೃಪ್ತಿ ವ್ಯಕ್ತಪಡಿಸಿ ಯೋಜನೆಯ ಪ್ರಮುಖ ಅಮೆರಿಕನ್ ಪಾಲುದಾರ Snopes.com ತನ್ನ ಯೋಜನೆಯಿಂದ ಹೊರನಡೆದಿತ್ತು.

ಫ್ಯಾಕ್ಸ್ ನ್ಯೂಸ್ ನ ನಿರೂಪಕ, ಕಟ್ಟರ್ ಬಲಪಂಥೀಯ ಟಕರ್ ಕಾರ್ಲ್ಸನ್ ಡೈಲಿ ಕಾಲರ್ ವೆಬ್ ಸೈಟ್ ನ ಸಹಸ್ಥಾಪಕ. ಈ ವೆಬ್ ಸೈಟ್ ನಿರಂತರ ಕಟ್ಟರ್ ವಾದಿ ಸುದ್ದಿಗಳನ್ನು, ವಿಚಾರಗಳನ್ನು ಪ್ರಕಟಿಸುವುದು ಮಾತ್ರವಲ್ಲದೆ ಸುಳ್ಳು ಹಾಗು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ ಆರೋಪ ಎದುರಿಸುತ್ತಿದೆ. ಸದಾ ಟ್ರಂಪ್ ಹಾಗು ಅವರ ರಾಜಕೀಯವನ್ನು ಬೆಂಬಲಿಸುವ ಈ ವೆಬ್ ಸೈಟ್ ಅಮೆರಿಕನ್ ಸಂಸದೆ ಅಲೆಕ್ಸಾಂಡ್ರಿಯಾ ಓಕಾಸಿಯೋ ಅವರದ್ದೆಂದು ಹೇಳಿ ಒಂದು ನಗ್ನ ಮಹಿಳೆಯ ಫೋಟೋ ಪ್ರಕಟಿಸಿ ವ್ಯಾಪಕ ಟೀಕೆಗೆ ಪಾತ್ರವಾಗಿತ್ತು. ಆದರೆ ಅದು ನಕಲಿ ಫೋಟೋ ಎಂದು ಮತ್ತೆ ಗೊತ್ತಾಗಿತ್ತು.

2016ರ ಅmeರಿಕನ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹಾಗು ಅಪಪ್ರಚಾರದ ಅಭಿಯಾನ ಬಹಳ ದೊಡ್ಡ ಪ್ರಮಾಣದಲ್ಲಿ ನಡೆದ ದೂರಿನ ಬಳಿಕ ಫೇಸ್ ಬುಕ್ ಈ ಸುಳ್ಳು ಸುದ್ದಿ ಪತ್ತೆ ಹಚ್ಚುವ ಯೋಜನೆ ಪ್ರಾರಂಭಿಸಿತ್ತು. ಡೈಲಿ ಕಾಲರ್ ವೆಬ್ ಸೈಟ್ ಅನ್ನು ಯೋಜನೆಗೆ ಸೇರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ ಬುಕ್ ಯಾವುದೇ ಮಾಧ್ಯಮ ಸಂಸ್ಥೆ ಅಂತರ್ ರಾಷ್ಟ್ರೀಯ ಮಾನ್ಯತೆ ಇರುವ ನಾನ್ ಪಾರ್ಟಿಸನ್ ಇಂಟರ್ನ್ಯಾಷನಲ್ ಫ್ಯಾಕ್ಟ್ ಚೆಕಿಂಗ್ ನೆಟ್ವರ್ಕ್ ನಿಂದ ಮಾನ್ಯತೆ ಪಡೆದ ಬಳಿಕ ಫೇಸ್ ಬುಕ್ ಸುಳ್ಳು ಸುದ್ದಿ ಪತ್ತೆ ಯೋಜನೆಗೆ ಸೇರಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News