ಕಾಪು: ಶೇ. 73.32 ಮತದಾನ; ಕೆಲವಡೆ ಕೈ ಕೊಟ್ಟ ಮತಯಂತ್ರ

Update: 2019-04-18 15:27 GMT

ಕಾಪು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಇಲ್ಲಿ ಸಂಜೆ 5 ಗಂಟೆಯವರೆಗೆ ಶೇ. 73.32 ರಷ್ಟು ಮತದಾನ ನಡೆದಿರುವುದಾಗಿ ವರದಿಯಾಗಿದೆ.

ಶುಭ ಕಾರ್ಯಗಳು ಹಾಗೂ ಬಿಸಿಲಿನ ತಾಪದಿಂದಾಗಿ ಮುಂಜಾನೆಯಿಂದಲೇ ಹೆಚ್ಚಿನ ಮತಗಟ್ಟೆಗಳಲ್ಲಿ ಮತ ಚಲಾಯಿಸಿಲು ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಮತಯಂತ್ರ ನಿಧಾನಗತಿಯ ಕಾರ್ಯಾಚರಣೆಯಿಂದ ಕೆಲ ಮತಗಟ್ಟೆಗಳಲ್ಲಿ ಜನ ಸರದಿಯಲ್ಲಿ ನಿಂತು ಕಾಯಬೇಕಾಯಿತು. ಬಿಸಿಲ ಬೇಗೆಯಿಂದ ಮಧ್ಯಾಹ್ನದ ವೇಳೆ ಮತಗಟ್ಟೆಗಳು ಮತದಾರರಿಲ್ಲದೆ ಬಿಕೋ ಅನಿಸಿತ್ತು. 

ಮತಯಂತ್ರದಲ್ಲಿ ದೋಷ: ಪಡುಬಿದ್ರಿ ಕಂಚಿನಡ್ಕದ 192ನೇ ಮತಗಟ್ಟೆಯ ಮತಯಂತ್ರದಲ್ಲಿ ಆರಂಭದಲ್ಲಿಯೇ ದೋಷ ಕಂಡು ಬಂದಿದ್ದರಿಂದ ಅದನ್ನು ತ್ವರಿತವಾಗಿ ಬದಲಾಯಿಸಿದರೂ, ಅರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು.

ಕೆಲವೆಡೆ ಇವಿಎಂನಲ್ಲಿ ದೋಷ : ಕಾಪುವಿನ ದಂಡತೀರ್ಥ, ಸರಕಾರಿ ಮಾದರಿ ಹಿ.ಪ್ರಾ. ಸಾಲೆ, ಪೊಲಿಪು, ಕಳತ್ತೂರು, ಹಿರಿಯಡಕ ಪಂಚನಬೆಟ್ಟು ಸಹಿತ 5-6 ಮತಗಟ್ಟೆಗಳಲ್ಲಿನ ಇವಿಎಂನಲ್ಲಿ ದೋಷ ಕಂಡು ಬಂದು ಮತದಾನ ಅರ್ಧ ಗಂಟೆ ವಿಳಂಬವಾಗಿ ನಡೆಯುವಂತಾಯಿತು. 

ಎಲ್ಲೂರು ಗ್ರಾಮ ಪಂ. ವ್ಯಾಪ್ತಿಯ ಕೆಮುಂಡೇಲು 168ನೇ ಮತಗಟ್ಟೆಯಲ್ಲಿ ಮಂದ ಬೆಳಕಿನಿಂದ ಸಾಮಾನ್ಯರಿಗೇ ಇವಿಯಂನಲ್ಲಿನ ಹೆಸರು ಗುರುತಿಸಲು ಅಸಾಧ್ಯವಾಯಿತಲ್ಲದೆ, ದೃಷ್ಟಿ ದೋಷವಿರುವವರು ಪರದಾಡಬೇಕಾಯಿತು. ಅದಮಾರಿನ 169ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 11 ಗಂಟೆಗೇ ಶೇ. 41ರಷ್ಟು ಮಂದಿ ಹಕ್ಕು ಚಲಾಯಿಸಿದರು.

ಹೆಜಮಾಡಿ, ಪಡುಬಿದ್ರಿ, ಪಲಿಮಾರು, ತೆಂಕ, ಬಡಾ, ಬೆಳಪು, ಎಲ್ಲೂರು, ಮುದರಂಗಡಿ ಹಾಗೂ ಪಲಿಮಾರು ಗಾಮ್ರ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಾಗೂ ಕಾಪುವಿನ ಕೆಲವಡೆಗಳಲ್ಲಿ ಮತಯಂತ್ರದಿಂದಾಗಿ ನಿಧಾನ ಗತಿಯಲ್ಲಿ ಮತದಾನ ನಡೆಯಿತು. 

ಗಡಿರೇಖೆಯೊಳಗೆ ವಾಹನ: ಮತಗಟ್ಟೆಗಳ ನೂರು ಮೀಟರ್ ಗಡಿರೇಖೆಯೊಳಗೆ ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧಿಸಿದ್ದರೂ, ತೆಂಕ ಗ್ರಾಮದ ಮತಗಟ್ಟೆಗಳಿಗೆ ಖಾಸಗಿ ವಾಹನಗಳ ಮೂಲಕ ಜನರನ್ನು ಕರೆ ತರಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನಗಳನ್ನು ಮತಗಟ್ಟೆ ಆವರಣದಿಂದ ಹಿಂದಕ್ಕೆ ಕಳುಹಿಸಿದರು.

ನವವಧು ನೇರ ಮತಗಟ್ಟೆಗೆ: ಉಚ್ಚಿಲ ಸುಭಾಸ್ ರಸ್ತೆಯ ಐತಪ್ಪ ಜಿ.ಸುವರ್ಣ, ಭಾರತಿ ಸುವರ್ಣ ದಂಪತಿ ಮಗಳಾದ ಶ್ರುತಿ ಸುವರ್ಣ ಅವರ ವಿವಾಹವು ಪೊಲಿಪು ರೋಹಿತ್ ಮೆಂಡನ್ ಜೊತೆ ಉಚ್ಚಿಲದ ತುಂಬೆ ಕರ್ಕೇರ ಸಭಾಂಗಣದಲ್ಲಿ ಎ.18ರಂದು ನಡೆಯಿತು.  ಮತದಾನದ ಮಹತ್ವ ಅರಿತ ನೂತನ ವಧು ತನ್ನ ಮತವನ್ನು ಚಲಾಯಿಸಲು ವಿವಾಹದ ಶುಭ ಸಮಾರಂಭ ಪೂರೈಸಿದ ಬಳಿಕ ನೇರವಾಗಿ ಉಚ್ಚಿಲದ ಬಡಾಗ್ರಾಮ ಪಂಚಾಯತ್ ಕಟ್ಟಡದಲ್ಲಿನ ಮತಗಟ್ಟೆಗೆ ಆಗಮಿಸಿದರು. ಈ ವೇಳೆ ಮತದಾನಕ್ಕೆ ಬಂದಿದ್ದ ಮತದಾರರನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಖಿ ಮತಗಟ್ಟೆಯಲ್ಲಿ ಸೆಲ್ಫಿ ಸಂಭ್ರಮ: ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದ್ಯಾವರ ಸೈಂಟ್ ಫ್ರಾನ್ಸಿಸ್ ಸ್ಕೂಲ್,  ಸೈಂಟ್ ಜೋನ್ಸ್ ಶಂಕರಪುರ - 1, ಸೈಂಟ್ ಜೋನ್ಸ್ ಶಂಕರಪುರ - 2 ಮತ್ತು ಕುರ್ಕಾಲು ಗ್ರಾಮ ಪಂಚಾಯತ್‍ನಲ್ಲಿ ತೆರೆಯಲಾಗಿದ್ದು, ಸಖಿ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಸಖಿ ಮತಗಟ್ಟೆಗಳಲ್ಲಿನ ಸೆಲ್ಪೀ ಸ್ಟ್ಯಾಂಡ್, ಚಿಣ್ಣರ ಅಂಗಳ, ವೈದ್ಯಕೀಯ ಸೌಲಭ್ಯಗಳನ್ನು ಮತದಾರರು ಮತ್ತು ಅವರೊಂದಿಗೆ ಬಂದಿದ್ದ ಮಕ್ಕಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಯುವ ಮತದಾರರು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. 

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಇಂದಿರಾ ಮೆಂಡನ್ ಅವರೊಂದಿಗೆ ಕೂಡಿಕೊಂಡು ಮತ ಚಲಾಯಿಸಿದರು.

ಸಸಿ ನೆಟ್ಟು ಚುನಾವಣಾ ಹಬ್ಬ ಆಚರಣೆ

ಮತದಾನ ಮಾಡಿದ ನೆನಪಿಗಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಇರಾದೆಯೊಂದಿಗೆ ಯುವಕರ ಗುಂಪೊಂದು ಸಸಿ ನೆಟ್ಟು ಚುನಾವಣ ಸಂಭ್ರಮವನ್ನು ಆಚರಿಸಿದರು.

ಕಾಪು ಪುರಸಭೆಯ ಮಲ್ಲಾರು ಕೊಂಬಗುಡ್ಡೆಯ ಮತದಾರರು ಸಮಾಜ ಸೇವಕ ಅನ್ವರ್ ಆಲಿಯವರ ನೇತೃತ್ವದಲ್ಲಿ ಮತ ನೀಡಿ ಬಂದು ಪರಿಸರ ರಕಷಣೆಗಾಗಿ ಗಿಡವನ್ನು ನೆಟ್ಟರು.

ಈ ಸಂದರ್ಭದಲ್ಲಿ ಮೊದಲ ಬಾರಿ ಮತ ಚಲಾಯಿಸಿದ ಅನೀಸ್ ಆಲಿ. ನಸೀರ್ ಅಹಮದ್, ಶೈಕ್ ನಝೀರ್, ರಮೇಶ್ ಶೆಟ್ಟಿ, ಧನಂಜಯ ಕುಮಾರ್, ಮಹೇಶ್ ಶೆಟ್ಟಿಗಾರ್, ಉಮೇಶ್ ಕರ್ಕೇರ, ಅಲ್ತಾಫ್, ಮಯ್ಯದ್ದಿ, ಸರ್ಫರಾಝ್ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News