ಮತದಾನ ಪ್ರಕ್ರಿಯೆಯ ವೀಡಿಯೊ ಫೇಸ್‌ಬುಕ್‌ನಲ್ಲಿ!

Update: 2019-04-18 15:42 GMT

ಉಸ್ಮಾನಾಬಾದ್,ಎ.18: ಗುರುವಾರ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಸಂದರ್ಭ ಕೆಲವು ಮತದಾರರು ಇಲ್ಲಿಯ ಮತಗಟ್ಟೆಯೊಂದರಲ್ಲಿ ತಮ್ಮ ಮತದಾನ ಪ್ರಕ್ರಿಯೆಯನ್ನು ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು,ಚುನಾವಣಾಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶದಂತೆ ಮತದಾರರು ಮತಗಟ್ಟೆಗಳ 100 ಮೀ.ವ್ಯಾಪ್ತಿಯಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಒಯ್ಯುವಂತಿಲ್ಲ. ಫೇಸ್‌ಬುಕ್‌ನಲ್ಲಿ ಮತದಾನದ ವೀಡಿಯೊವನ್ನು ಪೋಸ್ಟ್ ಮಾಡಿರುವುದು ಆಯೋಗದ ನಿರ್ದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಗುಪ್ತ ಮತದಾನ ನೀತಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಸಂಬಂಧಿತ ವ್ಯಕ್ತಿಗಳ ವಿರುದ್ಧ ಸೈಬರ್ ಕಾಯ್ದೆಯಡಿಯೂ ಪ್ರಕರಣಗಳನ್ನು ದಾಖಲಿಸಲಾಗಿದ್ದು,ಫೇಸ್‌ಬುಕ್‌ನಿಂದ ವೀಡಿಯೊಗಳನ್ನು ತೆಗೆಯುವಂತೆ ಅವರಿಗೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News