ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ: ಶೇ.75.8 ಮತದಾನ

Update: 2019-04-18 16:29 GMT

ಉಡುಪಿ, ಎ.18: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಎರಡು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಸರಿಸಿರುವ ಈ ಕ್ಷೇತ್ರದಲ್ಲಿ ಶೇ. 75.8ರಷ್ಟು ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಬೈಂದೂರನ್ನು ಹೊರತು ಪಡಿಸಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಶೇ.78.2 ಮತದಾನವಾಗಿದ್ದರೆ, ಕಡೂರು ಹೊರತು ಪಡಿಸಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ ಶೇ.73ರಷ್ಟು ಮತದಾನವಾಗಿದೆ ಎಂದು ವರದಿ ತಿಳಿಸಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.78, ಕುಂದಾಪುರದಲ್ಲಿ 77, ಕಾಪು 77, ಕಾರ್ಕಳ 78, ಚಿಕ್ಕಮಗಳೂರು ಶೇ.69, ಶೃಂಗೇರಿ 78, ಮೂಡಿಗೆರೆ 73 ಹಾಗೂ ತರೀಕೆರೆಯಲ್ಲಿ ಶೇ.72ರಷ್ಟು ಮತದಾನವಾಗಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.74.46ರಷ್ಟು ಮತದಾನವಾಗಿತ್ತು. ಆಗ ಉಡುಪಿ ಜಿಲ್ಲೆಯಲ್ಲಿ ಶೇ.77.15ರಷ್ಟು ಮತದಾನವಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೆೀ.71.95ರಷ್ಟು ಮತದಾನವಾಗಿತ್ತು.

ಕಳೆದ ಬಾರಿಯ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.1.34ರಷ್ಟು ಅಧಿಕ ಮತದಾನವಾಗಿದೆ.
8 ಇವಿಎಂಗಳಲ್ಲಿ ತಾಂತ್ರಿಕ ದೋಷ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಒಟ್ಟು ಎಂಟು ಇವಿಎಂ ಹಾಗೂ 53 ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅವುಗಳಲ್ಲಿ ಕೆಲವನ್ನು ದುರಸ್ತಿಗೊಳಿಸಿದರೆ, ಕೆಲವನ್ನು ಬದಲಿಸಲಾಯಿತು.

ಪಡುಬಿದ್ರಿಯ ಕಂಚಿನಡ್ಕದಲ್ಲಿ, ಹೆಬ್ರಿ ಹಾಗೂ ಕಾರ್ಕಳಗಳಲ್ಲಿ ಇವಿಎಂ ಯಂತ್ರಗಳು ಕೈಕೊಟ್ಟು ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಅವುಗಳನ್ನು ಬದಲಿಸಿದ ಬಳಿಕ ಮತ್ತೆ ಯಥಾಪ್ರಕಾರ ಮತದಾನ ಮುಂದುವರಿಯಿತು ಎಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಈಗ ಕಾಣಿಸಿಕೊಂಡಿರುವ ಬಿರುಬಿಸಿಲು ಹಾಗೂ ಸಹಿಸಲಸಾಧ್ಯ ಸೆಖೆಯೊಂದಿಗೆ ಬೀಸುತಿದ್ದ ಬಿಸಿಗಾಳಿಯ ಕಾರಣಕ್ಕೆ ಜನತೆ ಇಂದು ಬೆಳಗ್ಗೆ ಮತದಾನ ಪ್ರಾರಂಭಗೊಂಡ ಕ್ಷಣದಿಂದಲೇ ಗುಂಪು ಗುಂಪಾಗಿ ಬಂದು ಮತ ಚಲಾಯಿಸಿದರು. ಇದರಿಂದ 7 ಗಂಟೆಗೆ ಪ್ರಾರಂಭಗೊಂಡ ಮತದಾನ ಒಂದು ಗಂಟೆ ಮುಗಿಯುವ ವೇಳೆಗೆ ಕೆಲವು ಕಡೆಗಳಲ್ಲಿ ಶೇ.10ಕ್ಕೂ ಅಧಿಕ ಮತದಾನವಾಗಿತ್ತು.

ಹೆಚ್ಚಿನ ಮತಗಟ್ಟೆಯ ಎದುರು ಫರ್ಲಾಂಗ್ ಉದ್ದದ ಕ್ಯೂಗಳು ಕಂಡುಬಂದವು. ಹೀಗಾಗಿ ಜನರು 10ಗಂಟೆಯೊಳಗೆ ಬಂದು ಮತ ಚಲಾಯಿಸಿ ತೆರಳಿದರೆ, ಇನ್ನುಳಿದ ಮಂದಿ ಮಧ್ಯಾಹ್ನ ಮೂರು ಗಂಟೆಯ ಬಳಿಕ ತಾಪಮಾನ ಸ್ವಲ್ಪ ತಗ್ಗಿದ ಬಳಿಕ ಮನೆಯಿಂದ ಹೊರಬಂದು ಮತ ಹಾಕಿದರು. ಹೀಗಾಗಿ 11 ಗಂಟೆಯಿಂದ ಮೂರು ಗಂಟೆಯವರೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮತದಾನ ಭಾಗಶ: ಸ್ಥಗಿತಗೊಂಡ ರೀತಿಯ ಸನ್ನಿವೇಶ ಕಂಡುಬಂತು.

ಈ ಸನ್ನಿವೇಶ ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಕಂಡುಬಂತು. ಹೆಚ್ಚಿನ ಕಡೆಗಳಲ್ಲಿ 11 ಗಂಟೆಯವರೆಗೆ ಬಿರುಸಿನ ಮತದಾನ ನಡೆದರೆ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ ನಕ್ಸಲ್ ಬಾಧಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಈ ಅವಧಿಯಲ್ಲಿ ಶೇ.40ರಿಂದ 50ರಷ್ಟು ಮತದಾನವಾಗಿರುವುದು ಕಂಡುಬಂತು. ಹೆಬ್ರಿ ಸಮೀಪದ ಸೋಮೇಶ್ವರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ 669 ಮಂದಿ ಮತದಾರರಲ್ಲಿ ಆಗಲೇ 389 ಮಂದಿ ಮತ ಚಲಾಯಿಸಿಯಾಗಿತ್ತು.

ಇದೇ ಮೊದಲ ಬಾರಿ ಮತ ಹಾಕುವ ತರುಣ-ತರುಣಿಯರಲ್ಲಿ ವಿಶೇಷ ಉತ್ಸಾಹ ಕಂಡುಬಂತು. ದೇಶಕ್ಕೆ ಸಮರ್ಥ ರಾಜಕಾರಣಿಗಳನ್ನು ನೀಡುವಲ್ಲಿ ತಮ್ಮ ಪಾತ್ರವೂ ಇರುವ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ದೇಶ ಕಟ್ಟುವ, ದೇಶದ ಅಭಿವೃದ್ಧಿಗೆ ಇದು ತಮ್ಮ ಕಾಣಿಕೆ ಎಂಬುದು ಹೆಚ್ಚಿನ ಯುವ ಮತದಾರರ ಅಭಿಪ್ರಾಯವಾಗಿತ್ತು.

ಜಿಲ್ಲಾಧಿಕಾರಿ ಕೃತಜ್ಞತೆ: ಜಿಲ್ಲೆಯಲ್ಲಿ ಯಾವುದೇ ಗೊಂದಲಗಳಿಲ್ಲದೇ, ಶಾಂತಿಯುತವಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸಿದ ಜಿಲ್ಲೆಯ ಎಲ್ಲಾ ಮತದಾರರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News