ಲೋಕಸಭಾ ಚುನಾವಣೆ: ಬೆಳ್ತಂಗಡಿ ತಾಲೂಕಿನಲ್ಲಿ ಶೇ. 81 ರಷ್ಟು ಮತದಾನ

Update: 2019-04-18 16:35 GMT

ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಮತದಾನ ಅತ್ಯಂತ ಶಾಂತಿಯುತವಾಗಿ ನಡೆಯಿತು. ಉರಿ ಬಿಸಿಲನ್ನೂ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಸರತಿಯ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಲಭ್ಯ ಮಾಹಿತಿಯಂತೆ ತಾಲೂಕಿನಲ್ಲಿ ಶೇ. 81 ರಷ್ಟು ಮತದಾನವಾಗಿದೆ.

ತಾಲೂಕಿನಲ್ಲಿ ಮತಯಂತ್ರಗಳ ಮೂಲಕವಾಗಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದ್ದ ಕಾರಣ ಮತದಾರರು ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಬೇಕಾಗಿ ಬಂತು. ತಾಲೂಕಿನ ಹಲವೆಡೆ ಮತಯಂತ್ರಗಳು ಕೈಕೊಟ್ಟಕಾರಣ ತಡವಾಗಿ ಮತದಾನ ಆರಂಭವಾಯಿತು. ನಿಟ್ಟಡೆ, ಕಳಿಯ, ಪುದುವೆಟ್ಟು, ಬಡಕೋಡಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸಿ ಮತಯಂತ್ರಗಳನ್ನು ಸರಿಪಡಿಸಿದರು.

ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಉತ್ಸಾಹದ ಮತದಾನ: ತಾಲೂಕಿನಲ್ಲಿ ನಕ್ಸಲ್‍ಪೀಡಿತ ಮತಗಟ್ಟೆಗಳೆಂದು 42 ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇಲ್ಲಿ ವಿಶೇಷ ಭದ್ರತಾವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಜನರು ಈ ಕೇಂದ್ರಗಳಲ್ಲಿಯೂ ಉತ್ಸಾಹದಿಂದ ಆಗಮಿಸಿ ಮತಚಲಾಯಿಸಿದರು. 12 ಸೂಕ್ಷ್ಮ ಮತಗಟ್ಟೆಗಳಲ್ಲಿಯೂ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

42 ಗ್ರಾಮಂಚಾಯತುಗಳಲ್ಲಿ ಅಗತ್ಯವಿರುವವರಿಗಾಗಿ ವಿಶೇಷವಾಗಿ 63 ವಾಹನ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲೆಡೆ ವೀಲ್‍ಚೆಯರ್‍ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. 270 ಮೆಡಿಕಲ್ ಕಿಟ್ಟ್‍ಗಳನ್ನು ಒದಗಿಸಲಾಗಿತ್ತು, ಹಾಗೂ ಉಜಿರೆ, ವೇಣೂರು, ಕೊಕ್ಕಡ, ನಾರಾವಿಗಳಲ್ಲಿ ಆಂಬೂಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಸೇóಚೇತನರು ಹಾಗೂ ಅಶಕ್ತರು ಉತ್ಸಾಹದಿಂದ ಬಂದು ಮತದಾನದಲ್ಲಿ ಭಾಗವಹಿಸುತ್ತಿದ್ದರು. ತಾಲೂಕಿನ ವಿವಿದೆಡೆಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿತ್ತು ಹಲವೆಡೆ ನವದಂಪತಿಗಳು ನೇರವಾಗಿ ಮದುವೆ ಮಂಟಪದಿಂದ ಮತದಾನಕೇಂದ್ರಕ್ಕೆ ಆಗಮಿಸಿ ಮತದಾನಮಾಡಿದರು. 

ಬಿಗು ಭದ್ರತೆ: ತಾಲೂಕಿನ 241 ಬೂತ್ಗಳಿಗೆ ಶಾಂತಿಯುತ ಮತ್ತು ನಿರ್ಭೀತ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಒಂದು ಡಿವೈಎಸ್ಪಿ, 3 ಸಿಪಿಐ, 7 ಪಿಎಸ್‍ಐ, 14 ಮಂದಿ ಎಸ್ ಐ, 54 ಮಂದಿ ಎಚ್ ಸಿ, 145 ಪಿಸಿ, 176 ಹೋಮ್ ಗಾಡ್ರ್ಗಳನ್ನು  ತಾಲೂಕಿನಲ್ಲಿ ನಿಯೋಜಿಸಲಾಗಿತ್ತು.

ಇಂಡೋ ಇಬೇಟಿಯನ್ ಬಾರ್ಡರ್ ಒಂದು ಕಂಪನಿ... ಇದರಲ್ಲಿ 100 ಮಂದಿಯಿದ್ದು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿತ್ತು. ಪೂಂಜಾಲಕಟ್ಟೆ, ಗುರುವಾಯನಕೆರೆ, ಚಾರ್ಮಾಡಿ, ಕೊಕ್ಕಡ 4 ಪ್ರದೇಶಗಳನ್ನು ಕೇಂದ್ರವಾಗಿಸಿ 4 ಕಡೆಗಳಲ್ಲಿ ಡಿಎಆರ್ ಕಂಪನಿಗಳನ್ನು ನಿಯೋಜಿಸ ಲಾಗಿದ್ದು. ಉಜಿರೆಯಲ್ಲಿ ಒಂದು ಕಂಪನಿ (ತುಕಡಿ) ನಿಯೋಜಿಸಲಾಗಿತ್ತು. 

ಗಣ್ಯರಿಂದ ಮತದಾನ: ಧರ್ಮಸ್ಥಳದ ಧಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಮ್ಮ ಕುಟುಂಬಸ್ಥರೊಂದಿಗೆ ಧರ್ಮಸ್ಥಲ ಮಂಜುನಾಧೇಶ್ವರ ಹಿರಿಯ ಪ್ರಾಧಮಿಕ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅವರು ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್‍ಸಿ ಕೆ. ಹರೀಶ್ ಕುಮಾರ್ ಬೆಳ್ತಂಗಡಿ ಚರ್ಚ್ ರೋಡ್ ಮತಗಟ್ಟೆ ಸಂಖ್ಯೆ 104 ರಲ್ಲಿ ಮತ ಚಲಾಯಿಸಿದರು. ಶಾಸಕ ಹರೀಶ ಪೂಂಜ ಪಡಂಗಡಿಯ ಗರ್ಡಾಡಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ತನ್ನ ಪತ್ನಿ, ಮಗಳೊಂದಿಗೆ ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಮಂಗಳೂರು ಲೋಕಸಭಾ ಪಕ್ಷೇತರ ಅಭ್ಯರ್ಥಿ  ವೆಂಕಟೇಶ್ ಬೆಂಡೆ ಅವರು ಪಿಲ್ಯ ಸಮೀಪದ ನಾವರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 

ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬೆಳ್ತಂಗಡಿ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿದರು. ನ್ಯಾಯತರ್ಪು ಗ್ರಾಮದ ನಾಳ ಬೂತಿನಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ನಳಿನ್‍ಕುಮಾರ್ ಕಟೀಲು ಅವರು ತಾಲೂಕಿನ ವಿವಿದೆಡೆ ಭೇಟಿ ನೀಡಿ ಕಾರ್ಯ ಕರ್ತರನ್ನು ಹುರಿತುಂಬಿಸಿದರು. 

ಕಾಲಿನಿಂದ ಮತದಾನ: ವಿಕಲಚೇತನೆ ಎರಡೂ ಕೈಗಳಿಲ್ಲದ ಸಬಿತ ಮೋನಿಸ್ ಅವರು ಕಾಲಿನಿಂದಲೇ ಮತಚಲಾಯಿಸಿ ಎಲ್ಲರಿಗೂ ಮಾದರಿಯಾದರು. ಆರೋಗ್ಯವಂತರೇ ಮತದಾನದಿಂದ ದೂರವಿರುವ ಈ ದಿನಗಳಲ್ಲಿ ಸಬಿತಾ ಮೋನಿಸ್ ಅವರು ವೇಣೂರು ಸಮೀಪದ ಗರ್ಡಾಡಿಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. ಮತಗಟ್ಟೆ ಸಿಬಂಧಿಗಳು ಅವರ ಕಾಲಿಗೆ ಶಾಯಿ ಹಚ್ಚಿದರು. ಬಳಿಕ ಆಕೆ ಕಾಲಿನಿಂದಲೇ ಮತ ಚಲಾಯಿಸಿದರು. ಕಾಲಿನಿಂದಲೇ ಪರೀಕ್ಷೆ ಬರೆದು ಹಲವು ಪದವಿಗಳನ್ನು ಪಡೆದಿರುವ ಸಬಿತ ಅವರು ಇದೀಗ ಮತದಾನದ ಮೂಲಕವೂ ಇತರರಿಗೆ ಮಾದರಿಯಾಗಿದ್ದಾರೆ. 

ಗುರುವಾಯನಕೆರೆ ಟ್ರಾಫಿಕ್ ಜಾಮ್

ಒಂದೆಡೆಯಲ್ಲಿ ಲೋಕಸಭಾ ಚುನಾವಣೆಯಾದರೆ ಮತ್ತೊಂದೆಡೆ ತಾಲೂಕಿನ ವಿವಿಧೆಡೆಗಳಲ್ಲಿ ಮದುವೆ ಕಾರ್ಯಕ್ರಮಗಳು ಇದೆಲ್ಲ ಸೇರಿ ಗುರುವಾಯನಕೆರೆ ಪೇಟೆಯಲ್ಲಿ ಮಧ್ಯಾಹ್ನದ ವೇಳೆ ಕೆಲಕಾಲ ವಾಹನದಟ್ಟಣೆಯಿಂದಾಗಿ ವಾಹನ ಸಂಚಾರವೇ ಸ್ಥಗಿತಗೊಂಡಿತ್ತು. ಕೂಡಲೇ ಬೆಳ್ತಂಗಡಿ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಸಂಚಾರವನ್ನು ನಿಯಂತ್ರಿಸಿ ಸುಸಜ್ಜಿತಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News