ಕಾಪು ಮತಗಟ್ಟೆ ಸಮೀಪ ಬ್ಯಾಲೆಟ್ ಪೇಪರ್ ಪತ್ತೆ: ರಾಜಕೀಯ ನಾಯಕರು, ಪೊಲೀಸರ ಮಧ್ಯೆ ಮಾತಿನ ಚಕಮಕಿ

Update: 2019-04-18 17:30 GMT

ಉಡುಪಿ, ಎ.18: ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯ 100 ಮೀಟರ್ ಹೊರಗಡೆ ಇಂದು ಪತ್ತೆಯಾದ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಮಾಹಿತಿ ಹೊಂದಿರುವ ಬ್ಯಾಲೆಟ್ ಪೇಪರ್ ವಿಚಾರವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಗಳ ಮಾಹಿತಿ ಹೊಂದಿರುವ ಬ್ಯಾಲೆಟ್ ಪೇಪರ್ ಮತಗಟ್ಟೆ ಸಮೀಪ ಕಂಡು ಬಂದಿದ್ದು, ಇದನ್ನು ಪತ್ತೆ ಹಚ್ಚಿದ ಫ್ಲೈಯಿಂಗ್ ಸ್ಕ್ವಾಡ್ ತಂಡವು ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿತು. ಅದರಂತೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಹಾಗೂ ಕಾಪು ವೃತ್ತ ನಿರೀಕ್ಷಕ ಶಾಂತರಾಮ್, ಕಾಪು ಠಾಣಾಧಿಕಾರಿ ನವೀನ್ ನಾಯಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಮತಗಟ್ಟೆಗಳ ಸಮೀಪದ ಬೂತ್‌ಗಳಲ್ಲಿ ಸರಿಯಾದ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿ ಬೂತ್‌ಗಳಿಂದ ರಾಜಕೀಯ ಪಕ್ಷಗಳ ಕಾರ್ಯ ಕರ್ತರನ್ನು ತೆರಳುವಂತೆ ಪೊಲೀಸರು ಸೂಚಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಬಂಧ ಬೂತ್‌ನಲ್ಲಿ ಬ್ಯಾಲೆಟ್ ಪೇಪರ್ ಹೊಂದಿದ್ದ ಕಾಂಗ್ರೆಸ್‌ನ ಪುರಸಭಾ ಸದಸ್ಯೆ ಮತ್ತು ಬಿಜೆಪಿ ಕಾರ್ಯಕರ್ತೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.

ಇದೇ ಸಮಯ ಮಧ್ಯ ಸೇವಿಸಿ ಮತಗಟ್ಟೆಯ ಬಳಿ ಬಂದ ವ್ಯಕ್ತಿಯೊಬ್ಬನನ್ನು ಪೊಲೀಸರು ಪ್ರಶ್ನಿಸಿದ್ದು, ಈ ವಿಚಾರವಾಗಿ ಆ ವ್ಯಕ್ತಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತ್ತೆನ್ನಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದರು.

ಇದರಿಂದ ಪರಿಸ್ಥಿತಿ ಉದ್ವೇಗಕ್ಕೆ ತೆರಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ವಶಕ್ಕೆ ತೆಗೆದುಕೊಂಡ ವ್ಯಕ್ತಿ ಮತ್ತು ಮಹಿಳಾ ಕಾರ್ಯ ಕರ್ತೆಯರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಯಿತು. ಈ ಕುರಿತು ಚುನಾವಣಾ ಕರ್ತವ್ಯನಿರತ ಡಿವೈಎಸ್ಪಿ ಮಂಜುನಾಥ್, ಎಎಸ್‌ಪಿ ಕೃಷ್ಣಕಾಂತ್, ಸೇರಿದಂತೆ ಪೊಲೀಸ್ ಅಧಿಕಾರಿಗಳ ಜೊತೆ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಮೊದಲಾವರು ಮಾತುಕತೆ ನಡೆಸಿದರು.

ಬಳಿಕ ಮದ್ಯ ಸೇವಿಸಿ ವಾಹನ ಚಲಾಯಿಸಲು ಮುಂದಾದ ಯುವಕನ ವಿರುದ್ಧ ಕುಡಿತದೊಂದಿಗೆ ಚಾಲನೆ ಪ್ರಕರಣ ದಾಖಲಿಸಿ, ಬಿಡುಗಡೆಗೊಳಿಸಿದರು. ಬ್ಯಾಲೆಟ್ ಪೇಪರ್ ವಿಚಾರದಲ್ಲಿ ಠಾಣೆಗೆ ಕರೆತಂದಿದ್ದ ಮಹಿಳಾ ಕಾರ್ಯಕರ್ತೆಯರನ್ನು ಕೂಡ ಪೊಲೀಸರು ಕಳುಹಿಸಿಕೊಟ್ಟರು. ಬ್ಯಾಲೆಟ್ ಪೇಪರ್ ಹೊಂದಿದ್ದ ವಿಚಾರದಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್  ಅಧಿಕಾರಿ ಸುರೇಶ್ ನಾಯಕ್ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮತ್ತು ಸ್ಥಳೀಯ ನಾಯಕರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News