ಮತದಾನ: ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಆರಂಭ, ಜನರಲ್ಲಿ ಉತ್ಸಾಹ

Update: 2019-04-18 17:35 GMT

ಉಡುಪಿ, ಎ.18: ಉಡುಪಿ ಜಿಲ್ಲೆಯಲ್ಲಿ ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದು ಸಂಜೆ ಮುಕ್ತಾಯಗೊಂಡಿತು.

ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉಷ್ಣತೆಯ ಪ್ರಮಾಣ, ಬಿಸಿನ ಪ್ರಖರತೆ ಹಾಗೂ ಅಪರಾಹ್ನ 12ರ ಬಳಿಕ ಬೀಸುತ್ತಿ ರುವ ಬಿಸಿಗಾಳಿಯ ಕಾರಣ, ಜನರು ಮತದಾನ ಪ್ರಾರಂಭಗೊಳ್ಳು ತ್ತಿದಂತೆ ವಯೋಮಾನದ ಪರಿವೆ ಇಲ್ಲದೇ ಮತಗಟ್ಟೆಯತ್ತ ಧಾವಿಸಿ ಬರುವ ದೃಶ್ಯ ಎಲ್ಲಡೆ ಕಂಡುಬಂತು. ಹೀಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸರದಿ ಸಾಲು ಕಂಡುಬಂತು. ಯುವ ಮತದಾರರನ್ನು ಹೊರತು ಪಡಿಸಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು.

ಎಲ್ಲಾ ಮತಗಟ್ಟೆಗಳಲ್ಲಿ ವೀಲ್‌ಚೇರ್ ವ್ಯವಸ್ಥೆ ಮಾಡಿದ್ದು, ಪರ್ಕಳ ಶಲೆಯಲ್ಲಿ ಚಂದ್ರಶೇಖರ್ ಭಟ್ ಎಂಬುವವರು ಊರುಗೋಲು ನೆರವಿನಿಂದ ಬಂದು ಮತ ಚಲಾಯಿಸಿದರು. ವೃದ್ದ ಮತದಾರರು ತಮ್ಮ ಮನೆಯವರ ಸಹಾಯ ದಿಂದ ಬಂದು ಮತ ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲನ್ನು ವ್ಯವಸ್ಥೆಗೊಳಿಸಿ ಅವರಿಗೆ ಬೇಗನೇ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರೆ, ಹಿರಿಯ ನಾಗರಿಕರನ್ನು ಕಂಡರೇ ಕೂಡಲೇ ಕರೆದು ಅವರಿಗೂ ಅವಕಾಶ ಮಾಡಿಕೊಡಲಾಗುತ್ತಿತ್ತು.

ಆದರೆ ಕೆಲವು ಕಡೆಗಳಲ್ಲಿ ಹಿರಿಯ ನಾಗರಿಕರು ಇದಕ್ಕಾಗಿ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಮತಗಟ್ಟೆ ಅಧಿಕಾರಿಗಳೊಂದಿಗೆ ವಾದ-ವಿವಾದ ನಡೆಸುತಿದ್ದ ದೃಶ್ಯವೂ ಕೆಲವು ಕಡೆ ಕಂಡುಬಂದವು. ಜಿಲ್ಲೆಯಲ್ಲಿ ಹತ್ತಾರು ಕಡೆಗಳಲ್ಲಿ ಹಸೆ ಮಣೆ ಏರುವ ವಧು-ವರರು ಹೆಚ್ಚಾಗಿ ಮದುವೆ ವೇಷಭೂಷಣದಲ್ಲೇ ಮೊದಲು ಮತಗಟ್ಟೆಗೆ ಧಾವಿಸಿ ಬಂದು ಮತ ಚಲಾಯಿಸಿದ ಬಳಿಕ ಮದುವೆ ಮಂಟಪಗಳಿಗೆ ತೆರಳುವ ದೃಶ್ಯ ಕಂಡುಬಂತು. ಕೆಲವು ಮದುವೆ ಶಾಸ್ತ್ರಗಳೆಲ್ಲ ಮುಗಿದ ಬಳಿಕವೂ ಬಂದು ತಪ್ಪದೇ ಮತ ಚಲಾಯಿಸಿದರು.

ಬೈಲೂರಿನ ಸಖಿ ಕೇಂದ್ರದಲ್ಲಿ ಮಹಿಳೆಯರು ಮತದಾನಕ್ಕೆ ಸಾಲುಗಟ್ಟಿ ನಿಂತಿದ್ದರು. ಮತದಾರರಿಗೆ ಸೂಕ್ತ ನೆರಳಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಉಪಸ್ಥಿತರಿದ್ದರು. ಮಕ್ಕಳಿಗಾಗಿ ನಿರ್ಮಿಸಿದ್ದ ಚಿಣ್ಣರ ಅಂಗಳದಲ್ಲಿ ತಾಯಂದಿರ ಜೊತೆ ಬಂದ ಮಕ್ಕಳು, ವಿವಿಧ ಆಟಿಕೆಗಳೊಂದಿಗೆ ಉತ್ಸಾಹದಿಂದ ಆಡವಾಡುತ್ತಿದ್ದರು.

ನಾಡ್ಪಾಲು ಸೋಮೇಶ್ವರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಕ್ಸಲ್ ಬಾಧಿತ ಮತಗಟ್ಟೆಯಲ್ಲಿ ಅಪರಾಹ್ನ 12:00 ಗಂಟೆಯ ವೇಳಗೆ ಶೇ.55 ಕ್ಕೂ ಅಧಿಕ ಮತದಾನವಾಗಿತ್ತು. ಮತಗಟ್ಟೆಯ 669 ಮತದಾರರಲ್ಲಿ 389 ಮಂದಿ ಅದಾಗಲೇ ತಮ್ಮ ಮತ ಚಲಾಯಿಸಿ ತೆರಳಿದ್ದರು.

ಅಲ್ಲೇ ಸಮೀಪದ ಕಾಸನಮಕ್ಕಿ ಶಾಲಾ ಮತಗಟ್ಟೆಗೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಬಿಗಿ ಭದ್ರತೆ ಒದಗಿಸಲಾಗಿತ್ತು. ಇಲ್ಲೂ 706 ಮಂದಿ ಮತದಾರರಲ್ಲಿ 411 ಮಂದಿ ಅದಾಗಲೇ ಮತ ಚಲಾಯಿಸಿ ಆಗಿತ್ತು. ಇಂದು ಮತದಾನ ನಡೆದ 15 ನಕ್ಸಲ್ ಬಾಧಿತ ಮತಗಟ್ಟೆಗಳಿಗೆ ಹೆಬ್ರಿ ಕ್ಯಾಂಪ್‌ನ ನಕ್ಸಲ್ ನಿಗ್ರಹ ಪಡೆಯ ಯೋಧರು ಡಿವೈಎಸ್ಪಿ ಗಣೇಶ್ ಹೆಗಡೆ ನೇತೃತ್ವದಲ್ಲಿ ಗಸ್ತು ತಿರುಗುತ್ತಾ, ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದರು.

ಶಂಕರನಾರಾಯಣ ಬಳಿಯ ಸೌಡದಲ್ಲಿ ತೆರೆಯಲಾದ ಜನಾಂಗೀಯ ಮತಗಟ್ಟೆ (ಎಥ್ನಿಕ್ ಬೂತ್)ಯನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಈ ಮತಗಟ್ಟೆಯಲ್ಲಿ 1140 ಮತದಾರರಿದ್ದು, ಒಂದು ಗಂಟೆ ಸುಮಾರಿಗೆ ಇಲ್ಲಿ 553 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು, ಇಡೀ ಕ್ಷೇತ್ರದಲ್ಲಿ ಒಂದು ಗಂಟೆಯ ವೇಳೆಗೆ ಶೇ.41ರಷ್ಟು ಜನ ತಮ್ಮ ಮತವನ್ನು ಚಲಾಯಿಸಿದ್ದರು.

ಅಪರಾಹ್ನದ ಬಳಿಕ ನಿಧಾನಗತಿಯಲ್ಲಿದ್ದ ಮತದಾನ ಪ್ರಮಾಣ 4 ಗಂಟೆಯ ವೇಳೆಗೆ ಬಿಸಿಲು ಕಡಿಮೆಯಾದ ಕಾರಣ ಮತ್ತೆ ಚುರುಕಾಯಿತು. ಮತಗಟ್ಟೆಗಳ ಮುಂದೆ ಜನರ ಸಾಲು ಕಂಡು ಬರತೊಡಗಿತು. ಇದರಿಂದ ಮೂರುಗಂಟೆಗೆ ಶೇ.56ರಷ್ಟಿದ್ದ ಮತದಾನದ ಪ್ರಮಾಣ ಐದು ಗಂಟೆಯ ವೇಳೆಗೆ 73ಕ್ಕೆ ನೆಗೆದಿತ್ತು.

ಉಡುಪಿ ನಗರಸಭಾ ವ್ಯಾಪ್ತಿಯ ನಿಟ್ಟೂರಿನ ಹನುಮಂತನಗರ ಶಾಲೆಯಲ್ಲಿ ತೆರೆದಿದ್ದ ವಿಕಲಚೇತನ ಮತಗಟ್ಟೆಯಲ್ಲಿ ವಿಕಲಚೇತನ ಮತದಾರರಿಗೆ ಅಗತ್ಯ ವಿರುವ ವೀಲ್‌ಚೇರ್, ಮ್ಯಾಗ್ನಿಪೈಡ್ ಗ್ಲಾಸ್, ಸಹಾಯಕರ ನೆರವು, ಮತಗಟ್ಟೆಗೆ ಕರೆ ತರಲು ಮತ್ತು ಮನೆಗೆ ಬಿಡಲು ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಲಾ ಗಿತ್ತು. ಅಲ್ಲದೇ ಅವರಿಗೆ ಊರುಗೋಲುಗಳು, ಅವರಿಗಾಗಿ ಮತದಾನ ಮಾಡಲು ವಿಶೇಷ ಆದ್ಯತೆ, ಮತಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿತ್ತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ ಭಟ್ ಈ ಮತಗಟ್ಟೆಯ ಉಸ್ತುವಾರಿ ನೋಡಿಕೊಳ್ಳುತಿದ್ದರು. 1950 ಸಹಾಯವಾಣಿಯ ಮೂಲಕ ವಿಶೇಷಚೇತನರು, ಅಶಕ್ತ ಹಿರಿಯ ನಾಗರಿಕರು ವಾಹನ ಸೌಲ್ಯದ ನೆರವು ಪಡೆಯುತ್ತಿದ್ದರು. ಜಿಲ್ಲೆಯ ಎರಡು ವಿಕಲಚೇತನ ಮತಗಟ್ಟೆಯಲ್ಲಿ (ಇನ್ನೊಂದು ಕೋಡಿಕನ್ಯಾಣ) ಕಾರ್ಯ ನಿರ್ವಹಿಸಲು ವಿಕಲಚೇತನ ಅಧಿಕಾರಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಮಂದಿ ಇಲ್ಲಿ ನೀಡಿದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡರು ಎಂದು ನಿರಂಜನ್ ಭಟ್ ತಿಳಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿದ್ದ 20 ಸಖಿ ಮತಗಟ್ಟೆಗಳಲ್ಲೂ ಮಹಿಳೆಯರು ಉತ್ಸಾಹ ದಿಂದ ಬಂದು ಮತ ಚಲಾಯಿಸಿದರು. ಸಖಿ ಮತಗಟ್ಟೆಯಲ್ಲಿ ಮಹಿಳೆಯರಿ ಗಾಗಿ ಸೆಲ್ಫಿ ಜೋನ್ ವ್ಯವಸ್ಥೆಗೊಳಿಸಲಾಗಿತ್ತು. ಜಿಲ್ಲಾಡಳಿತ ಸಿದ್ದಪಡಿಸಿದ್ದ ಮತದಾನ ಜಾಗೃತಿ ಸಾರುವ ವಿಶೇಷ ಕೊಡೆಗಳ ಅಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News