ಯೇಸು ಕ್ರಿಸರ ‘ಕೊನೆಯ ಭೋಜನ’ ಸ್ಮರಣೆ: ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

Update: 2019-04-18 17:43 GMT

ಮಂಗಳೂರು, ಎ.18: ಕ್ರೈಸ್ತರು ಇಂದು ಪವಿತ್ರ ಗುರುವಾರವನ್ನು ಆಚರಿಸಿ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ಮತ್ತು ಇತರ ಕ್ರೈಸ್ತ ಪ್ರಾರ್ಥನಾ ಮಂದಿರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಗಳು ಜರಗಿದವು.

ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಬಲಿ ಪೂಜೆ ಮತ್ತು ಪರಮ ಪ್ರಸಾದದ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಕೆಥೆಡ್ರಲ್‌ನ ರೆಕ್ಟರ್ ಾ.ಜೆ.ಬಿ. ಕ್ರಾಸ್ತಾ ಅವರು ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.

ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ವಿಕ್ಟರ್ ಡಿಸೋಜ ಪ್ರವಚನ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಫಾ.ರೊಕಿ ಫೆರ್ನಾಂಡಿಸ್, ಕೆಥೆಡ್ರಲ್‌ನ ಸಹಾಯಕ ಗುರು ಫಾ.ಫ್ಲೆವಿಯನ್ ಲೋಬೊ, ಮೈನರ್ ಸೆಮಿನರಿಯ ರೆಕ್ಟರ್ ಫಾ.ಅನಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಅದರ ಸಂಕೇತವಾಗಿ ಕೆಥೆಡ್ರಲ್‌ನಲ್ಲಿ ಬಿಷಪರು ಹಾಗೂ ಇತರ ಚರ್ಚ್‌ಗಳಲ್ಲಿ ಸ್ಧಳೀಯ ಧರ್ಮಗುರುಗಳು 12 ಜನ ಕ್ರೈಸ್ತರ ಪಾದಗಳನ್ನು ತೊಳೆದರು. ಇದರಲ್ಲಿ ಶೇ.50ರಷ್ಟು ಮಹಿಳೆಯರು (6 ಮಂದಿ) ಇದ್ದರು. ಜತೆಗೆ ಯುವಜನರಿಗೆ, ವಯಸ್ಕರಿಗೆ, ರೋಗಿಗಳಿಗೆ ಹಾಗೂ ಧಾರ್ಮಿಕ ವ್ಯಕ್ತಿಗಳಿಗೂ ಪ್ರಾತಿನಿಧ್ಯ ನೀಡಲಾಗಿತ್ತು.

ಕೊನೆಯ ಭೋಜನದ ಸಂದರ್ಭದಲ್ಲಿಯೇ ಯೇಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರವನ್ನು ಹಾಗೂ ಧರ್ಮಗುರುಗಳ ದೀಕ್ಷಾ ಸಂಸ್ಕಾರವನ್ನೂ ಪ್ರಾರಂಭಿಸಿದ್ದ ಕಾರಣ ಈ ಎರಡು ಸಂಸ್ಕಾರಗಳ ಸ್ಮರಣೆಯನ್ನೂ ಮಾಡಲಾಯಿತು.

ಪರಮ ಪ್ರಸಾದದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ ಯೇಸು ಕ್ರಿಸ್ತರು ‘ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರಸ್ಪರ ಪ್ರೀತಿಸಬೇಕು’ ಎಂಬ ಹೊಸ ಉಪದೇಶವನ್ನು ನೀಡಿದ್ದರು. ಹಾಗಾಗಿ ಕ್ರೈಸ್ತ ಧರ್ಮ ಸಭೆಯ ಉಗಮ ಈ ದಿನದಂದು ಆಯಿತೆಂದು ಹೇಳಬಹುದು ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ತಮ್ಮ ಸಂದೇಶದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News