ವಿದೇಶ ಪಾರ್ಸೆಲ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಕುಟುಂಬ

Update: 2019-04-20 12:08 GMT

ಬಂಟ್ವಾಳ, ಎ. 20: ವಿದೇಶದ ಪಾರ್ಸೆಲ್‍ನಲ್ಲಿ ಬಂದ ಹೆಚ್ಚುವರಿ ಬ್ಯಾಗೊಂದನ್ನು ಮನೆಯ ಕುಟುಂಬಸ್ಥರು ಬಂಟ್ವಾಳ ನಗರ ಪೊಲೀಸರಿಗೊಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಬಿ.ಸಿ.ರೋಡ್‍ನಲ್ಲಿ ನಡೆದಿದೆ.

ಪರ್ಲಿಯಾ ನಿವಾಸಿ ಇಕ್ಬಾಲ್ ಹಾಗೂ ಶಾಹುಲ್ ಹಮೀದ್ ಎಂಬವರು ಕುಟುಂಬದ ಪರವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ್ ಅವರಲ್ಲಿ ಶನಿವಾರ ಬ್ಯಾಗ್‍ಅನ್ನು ಹಸ್ತಾಂತರ ಮಾಡಿದ್ದು, ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವಂತೆ ಕೋರಿದ್ದಾರೆ.

ಪರ್ಲಿಯಾ ಕುಟುಂಬವೊಂದು ವಿಮಾನದ ಮೂಲಕ ಅಬುಧಾಬಿಯಿಂದ ಬೆಂಗಳೂರಿಗೆ ಬಂದಿಳಿದಿತ್ತು. ಅವರು ತಂದ ಲಗೇಜನ್ನು ಬೆಂಗಳೂರಿನ ಪಾರ್ಸೆಲ್ ಡೆಲಿವರಿಯ ಕಂಪನಿಯೊಂದರಲ್ಲಿ ಹಣ ಪಾವತಿಸಿ, ಲಗೇಜನ್ನು ಮನೆ ವಿಳಾಸಕ್ಕೆ ತಲುಪಿಸುವಂತೆ ತಿಳಿಸಿದ ಕುಟುಂಬಸ್ಥರು, ಮನೆಗೆ ಬಂದಿದ್ದಾರೆ. ಆದರೆ, ಇದೀಗ ಮನೆಗೆ ಪಾರ್ಸೆಲ್ ಮೂಲಕ ಬಂದ ಲಗೇಜ್‍ನಲ್ಲಿ ಹೆಚ್ಚುವರಿಯಾಗಿ ಒಂದು ಬ್ಯಾಗ್ ಕಂಡುಬಂದಿದೆ. ಇದನ್ನು ಮನಗಂಡ ಕುಟುಂಬಸ್ಥರು ಈ ಬ್ಯಾಗ್ ಅನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಬ್ಯಾಗ್‍ನಲ್ಲಿ ವಸ್ತುಗಳಿದ್ದು, ಸಂಬಂಧಪಟ್ಟ ವಾರಸುದಾರರು ಈ ಬಗ್ಗೆ ಮಾಹಿತಿ ನೀಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಎಸ್ಸೈ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಬ್ಯಾಗ್ ಹಸ್ತಾಂತರ ಮಾಡುವ ವೇಳೆ ಎಸ್ಸೈ ಸುಧಾಕರ ತೋನ್ಸೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News