ಲೋಕಸಭಾ ಚುನಾವಣೆ ವೆಬ್‌ಕಾಸ್ಟಿಂಗ್; ಉಡುಪಿ ಶೇ.100 ಸಾಧನೆ
ಉಡುಪಿ, ಎ.20: ರಾಜ್ಯದಲ್ಲಿ ಎ.18ರಂದು ನಡೆದ ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲಾ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ ಒಟ್ಟು 54 ಮತಗಟ್ಟೆಗಳಲ್ಲಿ ಅಳವಡಿಸಿದ ಎಲ್ಲಾ ವೆಬ್ ಕ್ಯಾಮೆರಾಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯಿತು.
ಇತರೆ ಜಿಲ್ಲೆಗಳಲ್ಲಿ ಅಳವಡಿಸಿದ್ದ ಎಲ್ಲಾ ವೆಬ್‌ಕ್ಯಾಮರಾಗಳು ವಿವಿಧ ಕಾರಣಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ಉಡುಪಿಯಲ್ಲಿ ಅಳವಡಿಸಿದ್ದ ಎಲ್ಲಾ ಕೆಮರಾಗಳು ಯಾವುದೇ ಅಡೆತಡೆಗಳಿ ಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂಲಕ 14 ಜಿಲ್ಲೆಗಳ ಪೈಕಿ ಉುಪಿ ಜಿಲ್ಲೆ ಶೇ.100 ಸಾಧನೆ ಮಾಡಿದೆ.
ಜಿಲ್ಲೆಯ 54 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನವನ್ನು ಪರಿಶೀಲಿಸಲು ಹಾಗೂ ಈ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡದರೆ ಕೂಡಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೆಬ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾದ ನಿಯಂತ್ರಣ ಕೊಠಡಿ ಯಲ್ಲಿ ಈ ಎಲ್ಲಾ ಮತಗಟ್ಟೆಗಳ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಎ.18ರಂದು ರಾಜ್ಯದ ವಿವಿಧ ಜಿಲ್ಲೆಗಳ ಮತಗಟ್ಟೆಗಳಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲನೆಗೊಳಪಡಿಸಿದಾಗ ಉಡುಪಿ ಜಿಲ್ಲೆಯ ವ್ಯವಸ್ಥೆ ಶೇ.100ರಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಳವಡಿಸಿದ್ದ 110 ವೆಬ್ ಕ್ಯಾಮೆರಾ ಗಳಲ್ಲಿ ಗರಿಷ್ಠ 104 ಕೆಮರಾಗಳು ಕಾರ್ಯ ನಿರ್ವಹಿಸಿವೆ, ಮೈಸೂರಿನ 179 ರಲ್ಲಿ 163, ಚಿತ್ರದುರ್ಗದ 80ರಲ್ಲಿ 66, ತುಮಕೂರಿನ 140ರಲ್ಲಿ 131, ಮಂಡ್ಯದ 101ರಲ್ಲಿ 89, ಬೆಂಗಳೂರು ಸೆಂಟ್ರಲ್‌ನ 87ರಲ್ಲಿ 69, ಬೆಂಗಳೂರು ಉತ್ತರದ 101ರಲ್ಲಿ 95, ಕೋಲಾರದ 100ರಲ್ಲಿ 86, ರಾಮನಗರದ 60ರಲ್ಲಿ 59, ಬೆಂಗಳೂರು ದಕ್ಷಿಣದ 100ರಲ್ಲಿ 91, ಬೆಂಗಳೂರು ನಗರದ 100ರಲ್ಲಿ 95, ಹಾಸನದ 134ರಲ್ಲಿ 129, ಚಿಕ್ಕಬಳ್ಳಾಪುರದ 70ರಲ್ಲಿ 69 ಕಾರ್ಯ ನಿರ್ವಹಿಸಿದ್ದು, ಉಡುಪಿಯಲ್ಲಿ 54ರಲ್ಲಿ 54 ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವುದು ಕಂಡುಬಪಂದಿದೆ.
ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ನಿರ್ದೇಶನ ದಂತೆ, ಎ.7ರಿಂದಲೇ ವೆಬ್ ಕೆಮರಾ ಅಳಡಿಸಲು ಗುರುತಿಸಲಾಗಿದ್ದ 54 ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ವಿದ್ಯುತ್ ವ್ಯವಸ್ಥೆ, ಸಿಗ್ನಲ್ ದೊರೆಯುವ ಸ್ಥಳ ಇವುಗಳನ್ನು ಗುರುತಿಸಿ,ಸಂಬಂದಪಟ್ಟ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಪಂನ ಅಭಿವೃಧ್ದಿ ಅಧಿಕಾರಿಗಳಿಗೆ ಅಗತ್ಯವಿದ್ದ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿ, ಎಲ್ಲಾ ಮತಗಟ್ಟೆಗಳನ್ನು ವ್ಯವಸ್ಥಿತಗೊಳಿಸಲಾಗಿತ್ತು.
ಮತದಾನ ಹಿಂದಿನ ದಿನವೂ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳಿಗೆ ವೆಬ್ ಕೆಮರಾ ಅಳವಡಿಸಿದ ಪ್ಗಗ್‌ನ್ನು ಯಾವುದೇ ಕಾರಣಕ್ಕೆ ಬದಲಾಯಿಸದಂತೆ ಹಾಗೂ ಸೂಕ್ತ ಸ್ಥಳದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿತ್ತು ಎನ್ನುತ್ತಾರೆ ಜಿಲ್ಲಾ ವೆಬ್‌ಕಾಸ್ಟಿಂಗ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಸರ ಅಧಿಕಾರಿ ಡಾ.ಲಕ್ಷ್ಮಿಕಾಂತ್.
ಎ.23ರಂದು ನಡೆಯುವ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಇರುವ 16 ಸೂಕ್ಷ್ಮಮತಗಟ್ಟೆಗಳಲ್ಲಿ ವೆಬ್ ಕೆಮರಾ ಗಳನ್ನು ಅಳವಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ತಿಳಿಸಿದ್ದಾರೆ.