ಬಂಟ್ವಾಳ: ಎರವಲು ಪಡೆದ ಗದ್ದೆಯಲ್ಲಿ ನೂರು ದಿನಗಳಲ್ಲಿ ಭತ್ತದ ಪೈರು

Update: 2019-04-20 14:22 GMT

ಬಂಟ್ವಾಳ, ಎ. 20: ಸುಡುವ ಬಿಸಿಲಿಗೆ ಮನೆಯಿಂದ ಹೊರಹೋಗಲೂ ಮೈಗಳ್ಳತನ ಮಾಡುವ ಯುವಕರು ಇತ್ತ ನೋಡುವಂತೆ ಮಾಡಿದ್ದಾರೆ ಈ ನಾಲ್ವರು. ವಿಶಾಲವಾದ ಮೂರೆಕರೆ ಜಾಗವನ್ನು ಎರವಲು ಪಡೆದು ನೂರು ದಿನಗಳಲ್ಲಿ ಭತ್ತದ ಪೈರು ಮೇಲೇಳುವಂತೆ ಪ್ರಗತಿಬಂಧು ತಂಡದ ಸದಸ್ಯರು ಮಾಡಿ ದ್ದಾರೆ. ಕಟಾವು ಬಳಿಕ ಅಂದಾಜು 50 ಕ್ವಿಂಟಲ್ ಭತ್ತ ದೊರೆಯಲಿದೆ ಎಂದು ಪ್ರಗತಿಬಂಧು ತಂಡದ ಸದಸ್ಯರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ಬಿ.ಸಿ.ರೋಡ್ ಮಯ್ಯರಬೈಲು ಪಕ್ಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂದಿರದ ಹಿಂಬದಿ ಪ್ರಗತಿಬಂಧು ಒಕ್ಕೂಟವೊಂದು ನೂರು ದಿನಗಳಲ್ಲಿ ಬತ್ತದ ಬೆಳೆ ಬೆಳೆದ ಯಶೋಗಾಥೆ. ಸುಗ್ಗಿಯ ಬೆಳೆಯನ್ನು ಕಟಾವು ಮಾಡುವ ಹುಮ್ಮಸ್ಸಿನಲ್ಲಿರುವ ಈ ತಂಡ ಬಿಸಿಲು ಲೆಕ್ಕಿಸದೆ ಮೈಮುರಿದು ದುಡಿದದ್ದರ ಫಲ ಪಡೆಯುವ ಕಾಲ ಸನ್ನಿಹಿತವಾಗಿದೆ. ಭತ್ತದ ಕೃಷಿ ಕಣ್ಮರೆಯಾಗುತ್ತದೆ ಎಂಬ ಆತಂಕದ ಮಧ್ಯೆ ಯೋಜನೆ ಸದಸ್ಯರು ಇಚ್ಛಾಶಕ್ತಿ ಇದ್ದರೆ ಸಾಧಿಸಿ ತೋರಿಸಬಹುದು ಎಂದು ಸಾರುತ್ತಿದ್ದಾರೆ.

ಏನಿದು ಯೋಜನೆ?

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ರೋಡ್ ವಲಯದ ಪಂಜಿಕಲ್ಲು ಕಾರ್ಯಕ್ಷೇತ್ರದ ಆಚಾರಿಪಲ್ಕೆ ಒಕ್ಕೂಟದ ಕೇಳ್ದೋಡಿ (ಎ) ಪ್ರಗತಿಬಂಧು ಒಕ್ಕೂಟದ ಸದಸ್ಯರು ಭತ್ತ ಬೆಳೆಯುವ ಯೋಜನೆ ಕೈಗೊಳ್ಳುವ ವಿಚಾರವನ್ನು ಕಳೆದ ನಾಲ್ಕು ತಿಂಗಳ ಹಿಂದೆ ಮಂಡಿಸಿದರು. ಇದರ ಅಧ್ಯಕ್ಷರೂ ಆಗಿರುವ ರಾಜೇಶ್ ಗೌಡ, ಸದಸ್ಯರಾದ ಪದ್ಮನಾಭ ಪೂಜಾರಿ, ಬೂಬ ಮೂಲ್ಯ, ಮೋಹಿನಿ ಈ ನಾಲ್ವರೂ ಬಿ.ಸಿ.ರೋಡಿನ ಮಯ್ಯರಬೈಲಿನಲ್ಲಿರುವ ಪುರುಷೋತ್ತಮ ಮತ್ತು ವಾಸುಕುಲಾಲ್ ಅವರ ಜಾಗ ಗೇಣಿಗೆ ಪಡೆದು ಭತ್ತ ಬೆಳೆಯುವ ವಿಚಾರವನ್ನು ಪ್ರಸ್ತಾಪಿಸಿದರು.

ಅದರಂತೆ ವಲಯ ಮೇಲ್ವಿಚಾರಕ ರಮೇಶ್ ಎಸ್ ಮತ್ತು ಕೃಷಿ ಮೇಲ್ವಿಚಾರಕ ಮುರಳೀಧರ ಮಾರ್ಗದರ್ಶನದಲ್ಲಿ ಪುರುಷೋತ್ತಮ ಮತ್ತು ವಾಸು ಕುಲಾಲ್ ಅವರಿಬ್ಬರ ಮೂರು ಎಕರೆ ಜಾಗವನ್ನು ಗೇಣಿಗೆ ಪಡೆದು ಕೆಲಸದ ಶುಭಾರಂಭ ಮಾಡಿಯೇಬಿಟ್ಟರು. ಬಿತ್ತನೆ ಕಾರ್ಯ ನಡೆದು ಕೊಯ್ಲಿನವರೆಗೆ ಸುಮಾರು 100 ದಿನ ಅವಧಿಯಲ್ಲಿ ಪಂಜಿಕಲ್ಲಿನಿಂದ ಈ ನಾಲ್ವರೂ ಸದಸ್ಯರು ಪ್ರತಿನಿತ್ಯ ಆಗಮಿಸಿ, ಗದ್ದೆಯ ಕಾರ್ಯಗಳನ್ನು ನಡೆಸುತ್ತಿದ್ದರು.

ನೋಡನೋಡುತ್ತಿದ್ದಂತೆಯೇ ಖಾಲಿ ಬಿದ್ದಿದ್ದ ಜಾಗದಲ್ಲಿ ಭತ್ತದ ಪೈರುಗಳು ನಳನಳಿಸಲು ಆರಂಭಿಸಿದವು. ಉರಿಬಿಸಿಲು ಇದ್ದರೂ ಪ್ರಗತಿಬಂಧು ತಂಡದ ಸದಸ್ಯರ ಉತ್ಸಾಹಕ್ಕೆ ಕುಂದು ಬರಲಿಲ್ಲ. ಸುಮಾರು 45 ಸಾವಿರ ರೂ. ಖರ್ಚಾಗಿದೆ. ನಮ್ಮ ಸದಸ್ಯರೇ ಮೈಮುರಿದು ಕೆಲಸ ಮಾಡಿದ್ದಾರೆ. ಇದೀಗ ಕಟಾವಿನ ಹೊತ್ತು. ತಮ್ಮ ಶ್ರಮಕ್ಕೆ ತಕ್ಕ ಬೆಲೆ ದೊರಕಿರುವ ಸಂತಸ ಅವರಿಗಿದೆ ಎನ್ನುತ್ತಾರೆ ಕೃಷಿ ಮೇಲ್ವಿಚಾರಕ ಮುರಳೀಧರ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡದ ಸದಸ್ಯರು ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಭತ್ತದ ಕೃಷಿ ನಶಿಸಿಹೋಗುತ್ತಿರುವ ಆತಂಕ ಇರುವಾಗ ಉತ್ಸಾಹಿ ಸದಸ್ಯರು ತಾವೇ ಗದ್ದೆಗಿಳಿದು ಬೆಳೆದು ಛಲ ಇದ್ದರೆ ಸಾಧಿಸಬಹುದು ಎಂದು ಸಾರಿದ್ದಾರೆ.
- ರಮೇಶ್ ಎಸ್., ವಲಯ ಮೇಲ್ವಿಚಾರಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News