ಮೂಡುಬಿದಿರೆ: ಬೆಂಕಿ ಆಕಸ್ಮಿಕ; ಮನೆ ಭಸ್ಮ

Update: 2019-04-20 14:42 GMT

ಮೂಡುಬಿದಿರೆ: ಬೆಂಕಿ ಆಕಸ್ಮಿಕದಿಂದಾಗಿ ಮನೆಯೊಂದು ಭಸ್ಮಗೊಂಡಿದ್ದು, 3 ಲಕ್ಷ ಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯಲ್ಲಿ ನಡೆದಿದೆ.

ಒಂಟಿಕಟ್ಟೆ ಶಾಲೆಯ ಬಳಿ 5 ಸೆಂಟ್ಸ್ ಕಾಲನಿಯಲ್ಲಿರುವ ತಾಹೀರಬಾನು ಎಂಬವರಿಗೆ ಸೇರಿದ ಮನೆ ಶನಿವಾರ ನಸುಕಿನ ವೇಳೆ ಬೆಂಕಿಗಾಹುತಿಯಾಗಿದೆ. ಬಟ್ಟೆಬರೆ ಸೇರಿದಂತೆ ಮನೆಯಲ್ಲಿದ್ದ ಟಿ.ವಿ, ಕಪಾಟು, ಸೋಫಾ, ಗೃಹಪಯೋಗಿ ವಸ್ತುಗಳು, ನಾಲ್ಕು ಸಾವಿರ ರೂಪಾಯಿ ನಗದು ಹಾಗೂ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿದೆ. ಮನೆಯ ಬಾಗಿಲು ಸೇರಿದಂತೆ ಮರದ ವಸ್ತುಗಳು ಕೂಡ ಭಸ್ಮವಾಗಿದ್ದು ರೂ.3 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ.

ತಾಹೀರಬಾನು ಅವರ ಸಂಬಂಧಿ ಸಾದೀಕ್ ಎಂಬವರು ಈ ಮನೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಸಾದೀಕ್ ಅವರ ಪತ್ನಿ ಅತೀಜಮ್ಮ ಅನಾರೋಗ್ಯದಿಂದ 50 ದಿನಗಳ ಹಿಂದೆ ಮೃತಪಟ್ಟಿದ್ದರು. ಪತ್ನಿಯ ನಿಧನ ಬಳಿಕ ಸಾದೀಕ್ ತಮ್ಮ ಮಕ್ಕಳ ಜೊತೆ ಕೋಟೆಬಾಗಿಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ 8 ಗಂಟೆಗೆ ಸಾದಿಕ್ ಅವರು ಒಂಟಿಕಟ್ಟೆಯ ಮನೆಯಲ್ಲಿ ಅಗರಬತ್ತಿ ಹಚ್ಚಿ, ಬಳಿಕ ಕೋಟೆಬಾಗಿಲಿಗೆ ತೆರಳಿದರು. ಎರಡು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಸಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರಲು ಸಾಧ್ಯವಿಲ್ಲ ಎನ್ನುವುದು ಮನೆಯವರ ಅಭಿಪ್ರಾಯ.

ಶನಿವಾರ ಬೆಳಗ್ಗೆ 5 ಗಂಟೆಯ ವೇಳೆಗೆ ಪಕ್ಕದ ಮನೆಯ ಸಲೀಂ ಅವರು ನೋಡಿದಾಗ ಮನೆ ಬೆಂಕಿ ಆವರಿಸಿರುವುದು ಗಮನಕ್ಕೆ ಬಂದಿದೆ. ಬಳಿಕ ಸ್ಥಳೀಯರ ಜೊತೆಗೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅದಾಗಲೇ ಮನೆಯಲ್ಲಿದ್ದ ಸೊತ್ತುಗಳ ಭಸ್ಮವಾಗಿವೆ.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್, ಬಿಜೆಪಿ ಮುಖಂಡ ಮೇಘನಾಥ್ ಶೆಟ್ಟಿ, ಗ್ರಾಮಕರಣಿಕ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News